ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದ್ದು ಈ ವಾರ ಈ ಜಿಲ್ಲೆಗಳಲ್ಲಿ ಮಳೆ ಮತ್ತು ಹವಾಮಾನ ಬದಲಾವಣೆ ಹೇಗಿರಲಿದೆ ಇಲ್ಲಿದೆ ವಿವರ.
ನಿನ್ನೆಯಿಂದ ರಾಜ್ಯ ರಾಜಧಾನಿ ಬೆಂಗಳೂರು ಹವಾಮಾನದಲ್ಲೂ ಬದಲಾವಣೆಯಾಗಿದೆ. ಫೆಬ್ರವರಿಯಿಡೀ ಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಮಾರ್ಚ್ ನಲ್ಲಿ ಮಳೆಯ ಸೂಚನೆ ಸಿಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಇಂದೂ ಅದೇ ರೀತಿ ವಾತಾವರಣ ಮುಂಧುವರಿಯಲಿದೆ.
ಇನ್ನು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ 40 ಡಿಗ್ರಿಯ ಆಸುಪಾಸು ಬಂದು ನಿಂತಿದೆ. ಇಂದು ಮತ್ತು ನಾಳೆ ಈ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲವೆಡೆ ಸಣ್ಣ ಹನಿ ಮಳೆಯಾಗುವ ಸಾಧ್ಯತೆಯಿದೆ. ಬುಧವಾರದಂದು ಮಳೆಯಾಗುವ ಸೂಚನೆಯಿದೆ.
ಇನ್ನು, ಸಾಂಸ್ಕೃತಿ ನಗರಿ ಮೈಸೂರಿಗೂ ಮಳೆಯ ಸೂಚನೆಯಿದೆ. ಬಿಸಿಲಿನಿಂದ ತತ್ತರಿಸಿದ್ದ ಮೈಸೂರಿನಲ್ಲಿ ಇಂದು ಅಥವಾ ನಾಳೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಕರ್ನಾಟಕದ ಉತ್ತರ ಭಾಗಗಳಲ್ಲಿ ತಾಪಮಾನ ಯಥಾ ಪ್ರಕಾರ ಮುಂದುವರಿಯಲಿದೆ.