ಬೆಂಗಳೂರು: ಕಳೆದ ವಾರ ಮಳೆಯ ಅಬ್ಬರ ಕಡಿಮೆಯಾಗಿತ್ತು. ಈ ವಾರ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಬರುವ ಸಾಧ್ಯತೆಯಿದೆಯೇ? ಇಲ್ಲಿದೆ ವಾರದ ಹವಾಮಾನ ವರದಿ.
ಕಳೆದ ವಾರ ಬೆಂಗಳೂರಿನಲ್ಲಿ ಒಂದೆರಡು ದಿನ ಬಿಟ್ಟರೆ ಬಹುತೇಕ ಬಿಸಿಲಿನ ವಾತಾವರಣವಿತ್ತು. ಕರಾವಳಿ ಜಿಲ್ಲೆಗಳಲ್ಲೂ ಇದೇ ಕತೆ. ಭಾರೀ ಬಿಸಿಲು, ಸೆಖೆ ಕಂಡುಬಂದಿತ್ತು. ಮಲೆನಾಡಿನಲ್ಲೂ ಇದೇ ಪರಿಸ್ಥಿತಿ. ಆದರೆ ಉತ್ತರ ಜಿಲ್ಲೆಗಳಲ್ಲಿ ಮಾತ್ರ ಕೆಲವು ಕಡೆ ಮಳೆಯಾಗಿತ್ತು.
ಆದರೆ ಈ ವಾರ ಹವಾಮಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಇಷ್ಟು ದಿನ ಕೇವಲ ಮಳೆಯ ಅಬ್ಬರ ಮಾತ್ರವಿತ್ತು. ಆದರೆ ಈ ವಾರದ ಮಧ್ಯಭಾಗದಿಂದ ಬಹುತೇಕ ಕಡೆ ಗುಡುಗು ಸಹಿತ ಮಳೆಯ ಸೂಚನೆಯಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಮಾತ್ರವಿದ್ದರೆ ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆ ಕಂಡುಬರಲಿದೆ.
ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು, ರಾಮನಗರ, ಚಾಮರಾಜನಗರ, ಕೋಲಾರ, ತುಮಕೂರು, ಚಿತ್ರದುರ್ಗ, ಹಾವೇರಿ, ರಾಯಚೂರು, ಕೊಪ್ಪಳ, ಬೀದರ್, ಹುಬ್ಬಳ್ಳಿ, ಧಾರವಾಡ, ಯಾದಗಿರಿ, ಬೆಳಗಾವಿ, ಬಳ್ಳಾರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ವಾರ ಗುಡುಗು ಸಹಿತ ಮಳೆಯಾಗುವ ಸೂಚನೆಯಿದೆ. ಉಳಿದ ಕಡೆ ಮೋಡ ಕವಿದ ವಾತಾವರಣ ಮತ್ತು ಸಣ್ಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.