ಬೆಂಗಳೂರು: ಕರ್ನಾಟಕದಲ್ಲಿ ಈ ವಾರವಿಡೀ ಚಳಿಯ ವಾತಾವರಣವಿತ್ತು. ಮುಂದಿನ ವಾರ ಒಂದು ದಿನ ರಾಜ್ಯದಲ್ಲಿ ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದೆ. ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.
ಕಳೆದ ವಾರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಇದು ಈ ವರ್ಷದ ಮೊದಲ ಮಳೆಯಾಗಿತ್ತು. ಇದೀಗ ಮತ್ತೆ ಚಳಿಯ ವಾತಾವರಣ ಮುಂದುವರಿದಿದೆ. ಉತ್ತರ ಒಳನಾಡಿನಲ್ಲಂತೂ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪಿತ್ತು.
ಇಂದಿನಿಂದ ಕೊಂಚ ಮೋಡ ಕವಿದ ವಾತಾವರಣವಿದೆ. ನಾಲ್ಕೈದು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳಿದೆ. ಅರಬ್ಬಿ ಸಮುದ್ರದಲ್ಲಿ ಸಣ್ಣ ಮಟ್ಟಿಗೆ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದೆ ಎನ್ನಲಾಗಿದೆ.
ಮುಂದಿನ ವಾರಂತ್ಯದ ವೇಳೆಗೆ ಕರ್ನಾಟಕದಲ್ಲಿ ಕೆಲವೆಡೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಅದಾದ ಬಳಿಕ ತಾಪಮಾನದಲ್ಲಿ ನಿಧಾನವಾಗಿ ಏರಿಕೆ ಕಂಡುಬರಲಿದೆ. ಇನ್ನು ಎರಡು ವಾರದ ಬಳಿಕ ಚಳಿಯ ವಾತಾವರಣ ಮುಗಿದು ನಿಧಾನವಾಗಿ ಸೆಖೆಗಾಲ ಶುರುವಾಗಲಿದೆ.