ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ವಾತಾವರಣದಲ್ಲಿ ಸಣ್ಣ ಮಟ್ಟಿಗಿನ ಬದಲಾವಣೆಯಾಗಿದ್ದು ವಿಪರೀತ ಚಳಿ ಜೊತೆಗೆ ಮೋಡ ಕವಿದ ವಾತಾವರಣವಿದೆ. ಹಾಗಿದ್ದರೆ ಮಳೆಯ ಸಂಭವವಿದೆಯೇ ಇಲ್ಲಿದೆ ನೋಡಿ ವರದಿ.
ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಮಳೆಯಿಲ್ಲ. ಕಳೆದ ವಾರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಆದರೆ ಇದೀಗ ಮತ್ತೆ ವಿಪರೀತ ಚಳಿಯ ವಾತಾವರಣ ಮುಂದುವರಿದಿದೆ.
ಇನ್ನು ಕೆಲವು ದಿನ ವಾತಾವರಣ ಇದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಆದರೆ ಇಂದಿನಿಂದಲೇ ಹಲವೆಡೆ ಮೋಡ ಕವಿದ ವಾತಾವರಣವಿದೆ. ಆದರೆ ಮಳೆಯ ಸಾಧ್ಯತೆಯಿಲ್ಲ ಎನ್ನಲಾಗಿದೆ. ಚಳಿ ಮಾತ್ರ ವಿಪರೀತ ಎನ್ನುವ ಮಟ್ಟಕ್ಕೆ ತಲುಪಲಿದೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಚಳಿಯ ಪ್ರಮಾಣ ಮುಂದಿನ ಒಂದು ವಾರ ಕಾಲ ಹೆಚ್ಚಾಗಲಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಹಾವೇರಿ, ಗದಗ ಮುಂತಾದ ಜಿಲ್ಲೆಗಳಲ್ಲಿ ವಿಪರೀತ ಚಳಿಯಿರಲಿದೆ. ಉಳಿದಂತೆ ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಚಳಿ ಕೊಂಚ ಮಟ್ಟಿಗೆ ಕಡಿಮೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಒಣ ಹವೆ ಮುಂದುವರಿಯಲಿದೆ.
ವಿಜಯಪುರದಲ್ಲಿ ಅತ್ಯಂತ ಕನಿಷ್ಠ 12.4 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಹಾಗಿದ್ದರೂ ಅರಬ್ಬೀ ಸಮುದ್ರದಲ್ಲಿ ಸೈಕ್ಲೋನ್ ಸೃಷ್ಟಿಯಾಗುವ ಸೂಚನೆ ಕಂಡುಬಂದಿದ್ದು, ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಮೋಡ ಕವಿದ ವಾತಾವರಣವಿದೆ. ಸೈಕ್ಲೋನ್ ತೀವ್ರವಾದರೆ ಮಳೆಯಾಗುವ ಸಾಧ್ಯತೆಯಿದೆ.