ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ, ರಾಜ್ಯದಾದ್ಯಂತ ಸುದ್ದಿಯಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (84) ಗುರುವಾರ ನಿಧನರಾದರು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಮೊನ್ನೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸಾಗಿದ್ದರು. ಬೆಂಗಳೂರಿನ ಜ್ಯೋತಿಪುರದ ನಿವಾಸದಲ್ಲಿ ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.
ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಕಮಿಷನ್ ಆರೋಪ ಮಾಡಿದ್ದರು. ಆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದರು. ಪೇ ಸಿಎಂ ಅಭಿಯಾನ ನಡೆಸಲು ಪೂರಕವಾದ ಆರೋಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಇದೇ ವರ್ಷ ಫೆಬ್ರವರಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲೂ ಶೇ 40ರ ಕಮಿಷನ್ ಮುಂದುವರಿದಿದೆ ಎಂದು ಕೆಂಪಣ್ಣ ಆರೋಪಿಸಿದ್ದರು. ಕೆಂಪಣ್ಣ ಆರೋಪ ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿದ್ದರೆ, ಆಡಳಿತಾರೂಢ ಕಾಂಗ್ರೆಸ್ಗೆ ಇರಿಸುಮುರಿಸು ತಂದಿತ್ತು. ಗುತ್ತಿಗೆದಾರರ ಬಿಲ್ಗಳನ್ನು ಕ್ಲಿಯರ್ ಮಾಡಲು ಕಮಿಷನ್ ಕೇಳಲಾಗುತ್ತಿದೆ ಎಂದು ಕೆಂಪಣ್ಣ ಆರೋಪಿಸಿದ್ದರು.
ಕೆಂಪಣ್ಣ ಅವರ ನಿಧನ ಸುದ್ದಿ ಕೇಳಿ ನೋವುಂಟುಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40% ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಸಂತಾಪ ಸೂಚಿಸಿದ್ದಾರೆ.