ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ ಹೋಯ್ತು, ತ್ರಿವರ್ಣ ಧ್ವಜ ಬಂತು

Krishnaveni K

ಮಂಗಳವಾರ, 21 ಮೇ 2024 (10:40 IST)
File photo
ಮಂಡ್ಯ: ತೀವ್ರ ವಿವಾದಕ್ಕೀಡಾಗಿದ್ದ ಮಂಡ್ಯ ಹನುಮಧ್ವಜ ಪ್ರಕರಣಕ್ಕೀಗ ಒಂದು ರೀತಿಯ ಅಂತ್ಯ ಸಿಕ್ಕಿದೆ. ಹನುಮಧ್ವಜವನ್ನು ಕೆಳಗಿಳಿಸಿದ್ದ ಜಿಲ್ಲಾಡಳಿತ ಈಗ ಆ ಜಾಗದಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನೆನಪಿಗಾಗಿ ಮಂಡ್ಯದ ಕೆರೆಗೋಡಿನಲ್ಲಿ ಅರ್ಜುನ ಸ್ತಂಬದ ಮೇಲೆ ಹನುಮ ಧ್ವಜ ಹಾರಿಸಲಾಗಿತ್ತು. ಇದನ್ನು ಕೆಲವು ಸಮಯದ ಮೊದಲು ಜಿಲ್ಲಾಡಳಿತ ತೆರವುಗಳಿಸಿತ್ತು. ಇದು ತೀವ್ರ ವಿವಾದಕ್ಕೀಡಾಗಿತ್ತು. ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ, ಹಿಂದೂ ಸಂಘಟನೆಗಳ ನಡುವೆ ಸಂಘರ್ಷವೇರ್ಪಟ್ಟಿತ್ತು.

ಹಿಂದೂ ಸಂಘಟನೆಗಳು ಸ್ಥಳದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದವು. ಈ ಘಟನೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿಸಿತ್ತು. ಆದರೆ ಈಗ ಜಿಲ್ಲಾಡಳಿತ ಆ ಜಾಗದಲ್ಲಿ ಎತ್ತರದ ತ್ರಿವರ್ಣ ಧ್ವಜ ಹಾರಿಸಿದೆ. ಇಂದು ಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಹಳೆ ಧ್ವಜ ಕೆಳಗಿಳಿಸಿ ಹೊಸ ಧ್ವಜ ಹಾರಿಸಲಾಗಿದೆ.

ಹಾಗಿದ್ದರೂ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಇಷ್ಟು ದೊಡ್ಡ ಧ‍್ವಜಸ್ತಂಭದಲ್ಲಿ ಚಿಕ್ಕ ರಾಷ್ಟ್ರಧ್ವಜ ಹಾರಿಸಿ ಜಿಲ್ಲಾಡಳಿತ ರಾಷ್ಟ್ರಧ‍್ವಜಕ್ಕೆ ಅವಮಾನ ಮಾಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜೂನ್ 4 ರಂದು ಮತ್ತೆ ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಪ್ರತಿಭಟನೆ ನಡೆಯಲಿದೆ. ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಈ ಧ್ವಜಸ್ತಂಭ ನಿರ್ಮಿಸಿರುವುದರ ಮುಖ್ಯ ಉದ್ದೇಶ ಹನುಮಧ‍್ವಜ ಹಾರಿಸುವುದು. ಅದನ್ನು ಮತ್ತೆ ಪುನಸ್ಥಾಪಿಸುವುದು ನಮ್ಮ ಹೋರಾಟದ ಮುಖ್ಯ ಉದ್ದೇಶ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ