ಪತ್ರಕರ್ತರ ಭವನದಲ್ಲಿ ತಮ್ಮ ಸೋಲಿನ ಬಳಿಕ ಮಾದ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಬಿಸಿ ನನ್ನ ಕತ್ತು ಕೂಯ್ದಿದ್ದಾರೆ. ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ನನಗೆ ಸೋಲಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರೋದರಿಂದ ಸೋಲನ್ನ ಒಪ್ಪಿಕೊಂಡಿದ್ದೇನೆ. ಆದರೆ, ನನಗೆ ನಂಬಿಕೆ ದ್ರೋಹ ಮಾಡಲಾಗಿದೆ. ನಾನು ಚುನಾವಣೆಗೆ ನಿಲ್ಲಬೇಕೆಂದಾಗ ನನ್ನನ್ನು ಸಾ.ರಾ. ಮಹೇಶ್ ಸಂಪರ್ಕಿಸಿದ್ದರು. ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಗೆ ನಿಮ್ಮ ತಂಡದಲ್ಲಿ ಅವಕಾಶ ನೀಡಿ ಅಂತ ಕೇಳಿಕೊಂಡರು. ಹೆಚ್.ಡಿ.ಕುಮಾರಸ್ವಾಮಿಯವರೇ ಶ್ರೀಧರ್ ಅವರನ್ನು ನಿಮ್ಮ ತಂಡಕ್ಕೆ ಸೇರಿಸಲು ಹೇಳಿದ್ದಾರೆ. ಬೇಕಿದ್ದರೆ ಅವರ ಜೊತೆಯಲ್ಲಿ ಮಾತುಕತೆ ನಡೆಸೋಣ ಎಂದು ಸಾರಾ ಮಹೇಶ್ ಹೇಳಿದರು. ನಾನು ನಿಮ್ಮ ಮೇಲೆ ನಂಬಿಕೆ ಇದೆ ಅಂತ ಹೇಳಿ ಶ್ರೀಧರ್ ಅವರನ್ನ ನನ್ನ ತಂಡದಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದೆ.
ಆದರೆ, ಚುನಾವಣೆಗೂ ಎರಡು ದಿನಗಳ ಮುಂಚೆ ಹೆಚ್.ಡಿ ಕುಮಾರಸ್ವಾಮಿ ಉಲ್ಟಾ ಹೊಡೆದಿದ್ದಾರೆ. ನನ್ನ ವಿರುದ್ಧ ನಿಂತಿದ್ದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನ್ನ 7ಸಾವಿರ ಮತಗಳನ್ನು ಅವರ ಅಭ್ಯರ್ಥಿಗೆ ಹಾಕಿಸಿಕೊಂಡು ನನಗೆ ಅನ್ಯಾಯ ಮಾಡಿದ್ದಾರೆ. ನನ್ನನ್ನ ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿಯವರಿಗೆ ಈಗಲೂ ಚಾಲೆಂಜ್ ಮಾಡ್ತಿನಿ. ನಿಮಗೆ ಸಾಧ್ಯವಾದ್ರೆ ಕೆ.ವಿ.ಶ್ರೀಧರ್ ಗೆ ರಾಜೀನಾಮೆ ಕೊಡಿಸಿ ಮತ್ತೆ ಗೆಲ್ಲಿಸಿ. ಇದು ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಒಳ್ಳೆಯದಾಗಲ್ಲ ಎಂದು ಡಾ.ಕೆ.ಮಹದೇವ್ ಕಿಡಿ ಕಾರಿದರು.
ನಾನು ಇದುವರೆಗೂ ರಾಜಕೀಯ ಪ್ರವೇಶಿಸಿರಲಿಲ್ಲ. ಆದರೆ, ಇಂದಿನಿಂದ ನಾನು ರಾಜಕೀಯ ಆರಂಭಿಸುತ್ತೇನೆ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ರಾಜಕೀಯದ ಮೂಲಕವೇ ಉತ್ತರ ಕೊಡುತ್ತೇನೆ. ನನ್ನಂತಹವನ ಮೇಲೆ ಈ ರೀತಿ ಕಂತ್ರಿ ಕೆಲಸ ಮಾಡಿದವರಿಗೆ ಕ್ಷಮೆಯೇ ಇಲ್ಲ. ಕುತಂತ್ರ ಮಾಡಿದವರಿಗೆ ಕ್ಷಮೆಯೇ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಪ್ರಾಮಾಣಿಕ ನಾಯಕರನ್ನು ತುಳಿಯುತ್ತಿಲ್ಲ ಕೊಲೆ ಮಾಡುತ್ತಿದ್ದಾರೆ ಎಂದು ಡಾ ಕೆ ಮಹದೇವ್ ಹರಿಹಾಯ್ದರು.