ಗ್ಯಾರಂಟಿಗಳು ಯಾವತ್ತೂ ಹೊರೆಯಾಗಲ್ಲ: ಪರಮೇಶ್ವರ್ ಹೇಳಿಕೆಗೆ ಮುನಿಯಪ್ಪ ತಿರುಗೇಟು

Krishnaveni K

ಮಂಗಳವಾರ, 25 ಫೆಬ್ರವರಿ 2025 (15:59 IST)
ಬೆಂಗಳೂರು: ಗ್ಯಾರಂಟಿಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂಬ ಗೃಹಸಚಿವ ಜಿ ಪರಮೇಶ್ವರ್ ಹೇಳಿಕೆಗೆ ಸಚಿವ ಕೆಎಚ್ ಮುನಿಯಪ್ಪ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಗೃಹಸಚಿವ ಜಿ ಪರಮೇಶ್ವರ್ ಹೌದು, ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಆದರೆ ಬಡವರ ದೃಷ್ಟಿಯಿಂದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲೇಬೇಕಿದೆ. ಆದರೆ ಶ್ರೀಮಂತರು ಈ ಯೋಜನೆಯ ಲಾಭ ಪಡೆಯುವಂತಾಗಬಾರದು. ಈ ನಿಟ್ಟಿನಲ್ಲಿ ಗ್ಯಾರಂಟಿ ಪರಿಷ್ಕರಿಸುವ ಬಗ್ಗೆ ಗಮನ ಹರಿಸಲಿದ್ದೇವೆ ಎಂದಿದ್ದರು.

ಇದರ ಬಗ್ಗೆ ಮಾಧ್ಯಮಗಳು ಆಹಾರ ಸಚಿವ ಕೆಎಚ್ ಮುನಿಯಪ್ಪಗೆ ಪ್ರಶ್ನೆ ಮಾಡಿವೆ. ನಿಜವಾಗಿಯೂ ಗ್ಯಾರಂಟಿಯಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆಯಾ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಗ್ಯಾರಂಟಿಗಳು ಯಾವತ್ತೂ ಸರ್ಕಾರಕ್ಕೆ ಹೊರೆಯಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಹಲವು ಬಡವರಿದ್ದಾರೆ. ಅವರಿಗೆ ಒಳಿತಾಗಬೇಕು ಎನ್ನುವ ದೃಷ್ಟಿಯಿಂದ ಯೋಜನೆ ಜಾರಿಗೆ ತಂದಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲೂ ಅದೇ ಕಾರಣಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದೆವು.ಸರ್ಕಾರಗಳು ಜನರ ಬಡತನ ನೀಗಿಸುವ ಕೆಲಸ ಮಾಡಬೇಕು, ಜನರ ಕಷ್ಟಗಳಿಗೆ ಸ್ಪಂದನೆ ಮಾಡಬೇಕು ಎನ್ನುವ ದೃಷ್ಟಿಯಿಂದ ಇದೆ. ಹೀಗಾಗಿ ಗ್ಯಾರಂಟಿಗಳು ಯಾವತ್ತೂ ಹೊರೆಯಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ