ಅಂಬೇಡ್ಕರ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರಿಂದ ದೇಶ ಒಗ್ಗಟ್ಟು ಎಂದ ಖರ್ಗೆ

ಶುಕ್ರವಾರ, 19 ಅಕ್ಟೋಬರ್ 2018 (20:16 IST)
ಭಾರತದಲ್ಲಿ ಹುಟ್ಟಿರುವ ಬೌದ್ಧ ಧರ್ಮವನ್ನು ಅಂಬೇಡ್ಕರರು ಸ್ವೀಕರಿಸುವ ಮೂಲಕ ದೇಶವನ್ನು ಒಗ್ಗೂಡಿಸಿದ್ದಾರೆ. ಅವರು ಬೌದ್ಧ ಧರ್ಮದ ದೀಕ್ಷೆ ಪಡೆಯುವ ಮೂಲಕ ದೇಶದ ಎಲ್ಲ ಜನರನ್ನು ಒಗ್ಗಟ್ಟಾಗಿಸಿದ್ದಾರೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿಯ ಬುದ್ಧಮಂದಿರದಲ್ಲಿ ಜರುಗಿದ 62ನೇ ಧಮ್ಮ ಚಕ್ರ ಪರಿವರ್ತನಾ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಇತ್ತೀಚೆಗೆ ಅಂಬೇಡ್ಕರ ಅವರು ದೇಶದಲ್ಲಿ ಧರ್ಮ ಉಳಿಸುವ ಕಾರ್ಯ ಮಾಡಿದ್ದಾರೆ. ಇದರಿಂದಲೇ ಹಿಂದೂ ಧರ್ಮ ದೇಶದಲ್ಲಿ ಗಟ್ಟಿಯಾಗಿ ನೆಲೆಯೂರಿದೆ ಎಂದರು.

ದೇಶದಲ್ಲಿ ಧರ್ಮ ಸುಧಾರಣೆ ಮಾಡಿದ ಅನೇಕ ಮುಖಂಡರ ಹಾಗೂ ಶರಣರ ಮೇಲೆ ಬುದ್ಧನ ತತ್ವಗಳ ಪ್ರಭಾವ ಬೀರಿದೆ. ಗೌತಮ ಬುದ್ಧರ ಅಷ್ಟಾಂಗ ಮಾರ್ಗಗಳ ಬಗ್ಗೆ ತಮ್ಮ ತತ್ವಗಳಲ್ಲಿ ತಿಳಿಸಿದ್ದಾರೆ.  ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ಅರಿಷಡ್ವರ್ಗಗಳ ನಿಗ್ರಹ ಇದಕ್ಕೆ ಪೂರಕವಾಗಿದೆ. ಬೌದ್ಧ ಧರ್ಮದ ತತ್ವಗಳನ್ನು ಸಮಾಜ ಸುಧಾರಕರೆಲ್ಲರೂ ಒಪ್ಪಿಕೊಂಡು ಅದರ ಪ್ರಭಾವವನ್ನು ಸಮಾಜದ ಮೇಲೆ ಮೂಡಿಸಿದ್ದಾರೆ ಎಂದರು.

ಅಂಬೇಡ್ಕರ್ ಅವರ ಜೊತೆಗೆ ಅನೇಕ ಮುಖಂಡರು ಧಮ್ಮ ದೀಕ್ಷೆ ಪಡೆದಿದ್ದರು. ಅವರೆಲ್ಲರೂ ಕಲಬುರ್ಗಿಗೆ ಬಂದು ಹೋಗಿದ್ದಾರೆ. ಅಂಬೇಡ್ಕರ್ ಅವರು ಎಲ್ಲ ಜನರ ನಾಯಕರಾಗಿದ್ದಾರೆ ಆದರೆ ಕೆಲವರು ದಲಿತ ಜನಾಂಗದ ನಾಯಕರೆಂದು ಬಿಂಬಿಸುತ್ತಾರೆ. ಅದು ಬೇಸರದ ಸಂಗತಿಯಾಗಿದೆ. ಮನುಷ್ಯರೆಲ್ಲರೂ ಒಂದೇ ಎಂದು ಅಂಬೇಡ್ಕರ್ ಅವರು ಹೋರಾಟ ಮಾಡಿದ್ದರು. ಇಂದು ಗಂಡು ಮತ್ತು ಹೆಣ್ಣುಗಳಲ್ಲಿ ಭೇದ ಮೂಡಿಸುವಲ್ಲಿ ಕೆಲವರು ತೊಡಗಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ