ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್. ಅಂಬೇಡ್ಕರ ಅನುಯಾಯಿಗಳಿಗಾಗಿ ಏರ್ಪಡಿಸಲಾದ ನಾಗಪುರ ದಿಕ್ಷಾ ಭೂಮಿ ಯಾತ್ರೆಗೆ ಕಲಬುರಗಿಯಿಂದ ಪ್ರಯಾಣಿಸುತ್ತಿರುವ ಅನುಯಾಯಿಗಳಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಶುಭ ಹಾರೈಸಿದರು.
ಬುದ್ಧ ವಿಹಾರದ ಆವರಣದಲ್ಲಿ ನಾಗಪುರ ದಿಕ್ಷಾ ಭೂಮಿ ಯಾತ್ರೆಗೆ ಪ್ರಯಾಣಿಸುತ್ತಿರುವ ಹವಾನಿಯಂತ್ರಿತ ಹಾಗೂ ಸುಖಾಸೀನ ಕೆ.ಎಸ್.ಆರ್.ಟಿ.ಸಿ.ಯ ಐರಾವತ ಮಲ್ಟಿ ಎಕ್ಸೆಲ್ ಮೂರು ಬಸ್ಸುಗಳಿಗೆ ಚಾಲನೆ ನೀಡಿ, ಕಲಬುರಗಿಯಿಂದ ಪ್ರಯಾಣಿಸುತ್ತಿರುವ ಎಲ್ಲ 144 ಅನುಯಾಯಿಗಳಿಗೆ ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ವಸತಿ, ಊಟದ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು ಎಂದರು.
ಈ ವರ್ಷದಿಂದ ನಾಗಪುರ ದಿಕ್ಷಾ ಭೂಮಿಗೆ ಅನುಯಾಯಿಗಳ ಯಾತ್ರೆ ವಿಶೇಷ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ ಅವರು ಇಂದು 23 ಬಸ್ಸುಗಳಿಗೆ ಚಾಲನೆ ನೀಡಿದ್ದಾರೆ. ಈ ಎಲ್ಲ ಬಸ್ಸುಗಳಲ್ಲಿ ನಾಗಪುರಕ್ಕೆ ಪ್ರಯಾಣಿಸುವ ಅನುಯಾಯಿಗಳು ಅಕ್ಟೋಬರ್ 18, 19 ಹಾಗೂ 20ರಂದು ನಾಗಪುರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಕ್ಟೋಬರ್ 20ರ ಸಾಯಂಕಾಲ ಸ್ವಜಿಲ್ಲೆಗಳಿಗೆ ತೆರಳುವರು.
ಈ ಸಂದರ್ಭದಲ್ಲಿ ಗಣ್ಯರಾದ ವಿಠ್ಠಲ ದೊಡಮನಿ, ರಾಜೀವ ಜಾನೆ, ಮಲ್ಲಪ್ಪ ಹೊಸಮನಿ, ಅಶೋಕ ವೀರನಾಯಕ, ಸುದರ್ಶನ ಮದನಕರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸತೀಶ ಮತ್ತಿತರರು ಉಪಸ್ಥಿತರಿದ್ದರು.