ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನಿಗಾಗಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಭವಾನಿ ರೇವಣ್ಣ ಪರ ವಕೀಲ ಗಿರೀಶ್ ಕುಮಾರ್ ಬಿ.ಎಂ. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಕೇಸ್ ಸ್ವೀಕರಿಸಿ ಕೋರ್ಟ್ ಎಫ್ಆರ್ ನಂಬರ್ ನೀಡಿದೆ. ಇನ್ನು ಕೇಸ್ ನಂಬರ್ ನೀಡಿದ ಬಳಿಕ ಪೀಠಕ್ಕೆ ಅರ್ಜಿ ರವಾನೆಯಾಗುತ್ತದೆ. ಸೋಮವಾರ ಬೆಳಗ್ಗೆ 11:30ಕ್ಕೆ ಭವಾನಿ ರೇವಣ್ಣ ಪರ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಭವಾನಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರ ವಿರುದ್ಧ ಅರೆಸ್ಟ್ ವಾರಂಟ್ ಕೂಡ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪೊಲೀಸರ ನಾಲ್ಕು ವಿಶೇಷ ತಂಡಗಳಿಂದ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ
ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿರುವ ಎಸ್‌ಐಟಿ ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ.