ಉದ್ಯಮಿ ಕೆ.ಪಿ ನಂಜುಂಡಿ ವಿರುದ್ಧ ಅಪಹರಣ ಪ್ರಕರಣ ದಾಖಲು

ಗುರುವಾರ, 23 ಫೆಬ್ರವರಿ 2017 (11:16 IST)
ಪ್ರತಿಷ್ಠಿತ ಉದ್ಯಮಿ, ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಮಾಲೀಕ ಕೆ.ಪಿ. ನಂಜುಂಡಿ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ.

ನಂಜುಂಡಿ ಅವರ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ಆಗಿರುವ ತಮ್ಮ ಪತಿ ವಿಜಯ್ ಕುಮಾರ್ ಅವರನ್ನು ಅಪಹರಿಸಿ ಅನ್ನ, ನೀರು ನೀಡದೆ ಮೈಸೂರಿನ ಮನೆಯೊಂದರಲ್ಲಿ ಮೂರು ದಿನ ಕೂಡಿ ಹಾಕಲಾಗಿತ್ತು. ಅವರ ಮೊಬೈಲ್‌ನ್ನು ಸಹ ಕಸಿದುಕೊಳ್ಳಲಾಗಿತ್ತು. ಮೈಸೂರು ಪೊಲೀಸರು ನನ್ನ ಪತಿಯನ್ನು ರಕ್ಷಿಸಿದ್ದಾರೆ, ಎಂದು ಬುಧವಾರ ವಿಜಯ್ ಕುಮಾರ್ ಪತ್ನಿ ಅಲಮೇಲು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 
ಲಕ್ಷ್ಮಿ ಗೋಲ್ಡ್ ಪ್ಯಾಲೇಜ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ರಾಜನ್ , ಪ್ಯಾಲೇಸ್‌ನ ಮೈಸೂರು ಬ್ರ್ಯಾಂಚ್‌ನಲ್ಲಿ ಕೆಲಸ ಮಾಡುತ್ತಿರುವ ರಾಮಕೃಷ್ಣ, ರಾಜು ಕಾರ್ಯ, ಮಾಲೀಕ ನಂಜುಂಡಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. 
 
ಪ್ರಕರಣದಲ್ಲಿ ನಂಜುಂಡಿ ಎರಡನೆಯ ಆರೋಪಿಯಾಗಿದ್ದು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
 
ತಮಗೆ ಕಂಪನಿಯಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ನನ್ನನ್ನು ಅಪಹರಿಸಿ ಕೂಡಿ ಹಾಕಲಾಗಿತ್ತು ಎಂದು ವಿಜಯ್ ಕುಮಾರ್ ಸಹ ಪೊಲೀಸರಲ್ಲಿ ದೂರಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಿರುವ ನಂಜುಂಡಿ ಆತನನ್ನು ಅಪಹರಿಸಲಾಗಿಲ್ಲ. ಚಿನ್ನ ಕಳ್ಳತನ, ಹಣ ದುರುಪಯೋಗ ಪಡಿಸಿಕೊಂಡ ಆರೋಪ ಹೊತ್ತಿರುವ ಆತ ವೃಥಾ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದಿದ್ದಾರೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಪಿ.ನಂಜುಂಡಿ ಅವರ ಬಂಧನವಾಗುವ ಸಾಧ್ಯತೆಗಳು ಸಹ ಕಂಡು ಬರುತ್ತಿವೆ.
 

ವೆಬ್ದುನಿಯಾವನ್ನು ಓದಿ