ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಚಿವ ಕೆಎನ್ ರಾಜಣ್ಣ ಮತ್ತೊಂದು ವಿಚಾರ ಬಾಯ್ಬಿಟ್ಟಿದ್ದಾರೆ.
ನನ್ನನ್ನು ಎರಡು ಬಾರಿ ಹನಿಟ್ರ್ಯಾಪ್ ಮಾಡಲು ಯತ್ನ ನಡೆದಿತ್ತು ಎಂದು ರಾಜಣ್ಣ ಸದನದಲ್ಲಿಯೇ ಹೇಳಿಕೆ ನೀಡಿದ್ದರು. ತಮ್ಮನ್ನು ಮಾತ್ರವಲ್ಲದೆ, ಸುಮಾರು 48 ರಾಜಕೀಯ ನಾಯಕರ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಅವರು ಹೇಳಿದ್ದರು.
ಇದೀಗ ತಮ್ಮ ಹೇಳಿಕೆಗೆ ಬದ್ಧ ಎಂದು ಅವರು ಪುನರುಚ್ಚರಿಸಿದ್ದಾರೆ. ಎರಡು ದಿನಗಳ ಬಳಿಕ ನಾನು ಗೃಹಸಚಿವರನ್ನು ಭೇಟಿ ಮಾಡಿ ದೂರು ನೀಡುತ್ತೇನೆ. ನನ್ನನ್ನು ಯಾಕೆ ಟ್ರ್ಯಾಪ್ ಮಾಡಿದ್ರು ಗೊತ್ತಿಲ್ಲ. ನನ್ನ ಹನಿಟ್ರ್ಯಾಪ್ ಮಾಡಲು ಬಂದವರಿಗೆ ಕಪಾಳ ಮೋಕ್ಷ ಮಾಡಿದ್ದೆ. ರಮೇಶ್ ಜಾರಕಿಹೊಳಿ, ಪ್ರಜ್ವಲ್ ನಂತೆ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನಿನಗೆ ಹೇಗೆ ಅನಿಸುತ್ತದೋ ಹಾಗೆ ಮಾಡು ಎಂದು ಹೇಳಿದ್ದಾರೆ. ಹೀಗೆ ಸಾರ್ವಜನಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ಹಾಗಾಗಿ ದೂರು ನೀಡಲಿದ್ದೇನೆ ಎಂದಿದ್ದಾರೆ.