ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ವಿರೋಧಿಸಿ ಇಂದು ಕನ್ನಡ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಆದರೆ ಬಂದ್ ಗೆ ಜನ ಕ್ಯಾರೇ ಎಂದಿಲ್ಲ. ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆ ಜನಜೀವನ ಎಂದಿನಂತೆಯೇ ಇದೆ.
ಕರ್ನಾಟಕ ಬಂದ್ ಗೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಬೆಳಿಗ್ಗೆಯಿಂದಲೇ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳು ಎಂದಿನಂತೆ ಓಡಾಟ ನಡೆಸುತ್ತಿದೆ. ಜನರೂ ಸಹಜವಾಗಿ ತಮ್ಮ ಕೆಲಸಗಳತ್ತ ಸಾಗುತ್ತಿದ್ದಾರೆ.
ಇನ್ನು ಕೆಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬಹುತೇಕ ಶಾಲೆಗಳು ಎಂದಿನಂತೆ ನಡೆಯುತ್ತಿವೆ. ಪರೀಕ್ಷೆಗಳನ್ನೂ ಮುಂದೂಡಲಾಗಿಲ್ಲ. ಬಂದ್ ಗೆ ಓಲಾ, ಉಬರ್ ಸೇರಿದಂತೆ ಆಟೋ, ಕ್ಯಾಬ್ ಗಳೂ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬಂದ್ ಎಂದು ಮನೆಯಲ್ಲಿಯೇ ಕೂತರೆ ನಮ್ಮ ಹೊಟ್ಟೆ ಪಾಡೇನು ಎಂದು ವ್ಯಾಪಾರಿಗಳು ಪ್ರಶ್ನೆ ಮಾಡಿದ್ದಾರೆ.
ಇನ್ನು, ಬಂದ್ ಗೆ ಚಿತ್ರರಂಗ ಬೆಂಬಲ ಘೋಷಿಸಿರುವ ಕಾರಣಕ್ಕೆ ಇಂದು ಥಿಯೇಟರ್ ಗಳಲ್ಲಿ ಸಿನಿಮಾ ಪ್ರದರ್ಶನವಿರಲ್ಲ. ಕೆಲವೆಡೆ ಕನ್ನಡ ಹೋರಾಟಗಾರರು ಅಂಗಡಿ ಮುಚ್ಚಿ ಬಂದ್ ಗೆ ಸಹಕರಿಸಿ ಎಂದು ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂದಿದೆ.