ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 3 ದಿನಗಳ ನಿರಶನ ಆರಂಭಿಸಿದ್ದ ಬಾಲಕಿ

ಶನಿವಾರ, 16 ಜುಲೈ 2016 (13:19 IST)
ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಪೋಷಕರಿಗೆ ಹಲವು ಬಾರಿ ಒತ್ತಾಯಿಸಿದರೂ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ 15 ವರ್ಷದ ಬಾಲಕಿ ಮೂರು ದಿನಗಳ ಕಾಲ ಉಪವಾಸ ನಡೆಸಿ ಕೊನೆಗೂ ಪೋಷಕರ ಮನಗೆಲ್ಲುವಲ್ಲಿ ಯಶಸ್ವಿಯಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ. 
 
ತಾಯಿ ಸಣ್ಣನಿಂಗಮ್ಮಗೆ ಹಲವು ಬಾರಿ ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಒತ್ತಡ ಹೇರಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದಾನಾಪುರದಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಮಲ್ಲಮ್ಮ  ಬಾಗ್ಲಾಪುರ್ ಜುಲೈ 12 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾಳೆ. ಮಾಹಿತಿ ತಿಳಿದ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಬಾಲಕಿಗೆ ಆಶ್ವಾಸನೆ ನೀಡಿ ನಿರಶನ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಪ್ರಚಾರ ಕಾರ್ಯ ಕೈಗೊಳ್ಳಲು ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡುತ್ತಿದ್ದೆ. ಆದರೆ, ದಾನಾಪುರ್‌ಗೆ ಬಂದಾಗ ಹೊಸ ಧನಾತ್ಮಕ ಅನುಭವ ಎದುರಾಯಿತು. ಶೌಚಾಲಯ ನಿರ್ಮಾಣಕ್ಕಾಗಿ ಬಾಲಕಿ ನಿರಶನ ನಡೆಸಿದ್ದಾಳೆ ಎನ್ನುವುದು ತಿಳಿಯಿತು.  ಆದ್ದರಿಂದ ಅಲ್ಲಿಗೆ ತೆರಳಿ ಬಾಲಕಿ ಮನವೊಲಿಸಿ ಶೌಚಾಲಯ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯಿತಿಯಿಂದ ಹಣಕಾಸಿನ ನೆರವು ನೀಡಲಾಯಿತು ಎಂದು ತಿಳಿಸಿದ್ದಾರೆ.
 
ಶಾಲೆಯಲ್ಲಿ ಶಿಕ್ಷಕರು ಮನೆಯಲ್ಲಿ ಶೌಚಾಲಯ ನಿರ್ಮಾಣ ಕುರಿತಂತೆ ಹೆಚ್ಚಿನ ಪ್ರಚಾರ ನೀಡಿದ್ದರಿಂದ ಆಕೆಗೆ ನೈರ್ಮಲ್ಯತೆಯ ಬಗ್ಗೆ ಅರಿವಾಯಿತು. ಶೌಚಾಲಯ ನಿರ್ಮಾಣಕ್ಕಾಗಿ ದಲಿತ ಕುಟುಂಬಗಳಿಗೆ ಸರಕಾರ 15 ಸಾವಿರ ರೂಪಾಯಿ ನೆರವು ನೀಡುತ್ತಿದೆ ಎಂದು ತಿಳಿದ ನಂತರ ನಾನು ಉಪವಾಸ ನಿರಶನ ಆರಂಭಿಸಿದೆ ಎಂದು ಬಾಲಕಿ ತಿಳಿಸಿದ್ದಾಳೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ