India Pakistan: ಶಾಂತಿ ಮಾತುಕತೆ ಮಾಡೋಣ ಬನ್ನಿ: ಭಾರತದ ಎದುರು ಅಂಗಲಾಚುತ್ತಿರುವ ಪಾಕಿಸ್ತಾನ

Krishnaveni K

ಶುಕ್ರವಾರ, 16 ಮೇ 2025 (08:52 IST)
ನವದೆಹಲಿ: ಒಂದೆಡೆ ಕದನದಿಂದಾಗಿ ಭಾರೀ ನಷ್ಟ, ಇನ್ನೊಂದೆಡೆ ಸಿಂಧೂ ನದಿ ನೀರಿಲ್ಲದೇ ಬವಣೆ. ಇದರಿಂದ ಬೇಸತ್ತಿರುವ ಪಾಕಿಸ್ತಾನ ಈಗ ಭಾರತಕ್ಕೆ ಮಾತುಕತೆಗೆ ಆಹ್ವಾನ ನೀಡಿದೆ.

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತ ಏರ್ ಸ್ಟ್ರೈಕ್ ನಡೆಸಿತ್ತು. ಇದಕ್ಕೆ ಪಾಕಿಸ್ತಾನ ಪ್ರತೀಕಾರ ತೀರಿಸಲು ಮುಂದಾಗಿತ್ತು. ನಮ್ಮ ಪ್ರತಿ ರಕ್ತ ಹನಿಗೂ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಕೊಚ್ಚಿಕೊಂಡಿದ್ದರು.

ಭಾರತದ ದಾಳಿಯಿಂದ ಅನಾಹುತವಾಗುತ್ತಿದ್ದಂತೇ ಕದನ ವಿರಾಮಕ್ಕೆ ಮೊರೆಯಿಟ್ಟರು. ಕದನ ವಿರಾಮವಾಗುತ್ತಿದ್ದಂತೇ ನಾವೇ ಗೆದ್ದೆವೆಂದು ಬೀಗಿಕೊಂಡರು. ಆದರೆ ಕದನ ವಿರಾಮ ಘೋಷಿಸಿದರೂ ಭಾರತೀಯ ಸೇನೆ ಉಗ್ರರ ಬೇಟೆ ನಡೆಸುತ್ತಿರುವುದು ಮತ್ತು ಸಿಂಧೂ ನದಿ ಒಪ್ಪಂದ ಪುನಸ್ಥಾಪಿಸದಿರುವುದು ಪಾಕ್ ಚಿಂತೆಗೆ ಕಾರಣವಾಗಿದೆ.

ಸಿಂಧೂ ನದಿ ನೀರು ಹಂಚಿಕೆ ಮಾಡುವಂತೆ ಅಂಗಲಾಚುತ್ತಿರುವ ಪಾಕಿಸ್ತಾನ ಈಗ ಶಾಂತಿ ಮಾತುಕತೆಗೂ ಆಹ್ವಾನ ನೀಡಿದೆ. ಶಾಂತಿಗಾಗಿ ನಾವು ಭಾರತದ ಜೊತೆ ಮಾತುಕತೆಗೆ ಸಿದ್ಧವಿದ್ದೇವೆ. ಶಾಂತಿಗಾಗಿ ಷರತ್ತುಗಳು ಕಾಶ್ಮೀರ ಸಮಸ್ಯೆಯನ್ನೂ ಒಳಗೊಂಡಿರುತ್ತದೆ. ಆದರೆ ಪ್ರಧಾನಿ ಮೋದಿ ಈಗಾಗಲೇ ಮಾತುಕತೆ ಎನ್ನುವುದಿದ್ದರೆ ಅದು ಉಗ್ರರ ನಿಗ್ರಹದ ಬಗ್ಗೆ ಮಾತ್ರ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ