ಆರ್ ಎಸ್ಎಸ್ ನವರೇ ಮುಸ್ಲಿಮರಂತೆ ಬಂದು ಮೈಸೂರಲ್ಲಿ ಗಲಾಟೆ ಮಾಡಿದಾರೆ: ಕಾಂಗ್ರೆಸ್ ನಾಯಕ ಲಕ್ಷ್ಮಣ್
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಧರ್ಮಗುರುಗಳ ಬಗ್ಗೆ ಸುರೇಶ್ ಎಂಬಾತ ಅವಹೇಳನಕಾರೀ ಪೋಸ್ಟ್ ಮಾಡಿದ್ದಾನೆಂದು ರೊಚ್ಚಿಗೆದ್ದ ಯುವಕರ ಗುಂಪು ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ಎಸೆದು ದಾಂಧಲೆ ನಡೆಸಿತ್ತು. ಇಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಸುರೇಶ್ ನನ್ನು ಬಂಧಿಸಿಟ್ಟಿದ್ದರು.
ಘಟನೆ ಈಗ ರಾಜಕೀಯ ತಿರುವು ಪಡೆದಿದೆ. ಇದೆಲ್ಲಾ ಮುಸ್ಲಿಮರ ಓಲೈಕೆಯ ಪರಿಣಾಮ ಎಂದು ಬಿಜೆಪಿ ಆರೋಪಿಸಿದರೆ ಇತ್ತ ಕಾಂಗ್ರೆಸ್ ಬಿಜೆಪಿ ಇದನ್ನು ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ. ಆದರೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಲ್ಲಿ ಗಲಾಟೆ ಮಾಡಿದವರು ಮುಸ್ಲಿಮರೇ ಅಲ್ಲ. ಆರ್ ಎಸ್ಎಸ್ ನವರೇ ಸುಮಾರು 300 ಮಂದಿ ಒಟ್ಟು ಸೇರಿಸಿ ಮುಸ್ಲಿಮರ ವೇಷದಲ್ಲಿ ಬಂದು ಗಲಾಟೆ ಎಬ್ಬಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರ ಈ ಹೇಳಿಕೆಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೋಸ್ಟ್ ಹಾಕಿದ ಕಿಡಿಗೇಡಿಗೂ ಆರ್ ಎಸ್ಎಸ್ ಕಾರ್ಯಕರ್ತ ಪಟ್ಟ ಕಟ್ಟಲಾಗಿದೆ. ಈಗ ಅಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದವರೂ ಆರ್ ಎಸ್ಎಸ್ ನವರು ಎಂದು ಹಸಿ ಹಸಿ ಸುಳ್ಳು ಹೇಳುತ್ತಿದ್ದೀರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.