ಮುಸಲ್ಮಾನರನ್ನು ಸಂತೋಷಪಡಿಸಲು ವಯನಾಡಿನಲ್ಲಿ ಕರ್ನಾಟಕ ಮನೆ ಕಟ್ಟಿಸುತ್ತಿದೆ: ಈಶ್ವರಪ್ಪ ವ್ಯಂಗ್ಯ

Krishnaveni K

ಗುರುವಾರ, 12 ಡಿಸೆಂಬರ್ 2024 (16:30 IST)
ಬೆಂಗಳೂರು: ವಯನಾಡಿನ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರದ ವತಿಯಿಂದ 100 ಮನೆ ಕಟ್ಟಿಸಿಕೊಡುವುದಾಗಿ ಸಿಎಂ ಸಿದ್ದರಾಮಯ್ಯ ವಾಗ್ದಾನ ನೀಡಿರುವುದನ್ನು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.

ನಮ್ಮ ರಾಜ್ಯದಲ್ಲೇ ಬೇಕಾದಷ್ಟು ಸಮಸ್ಯೆ ಇರುವಾಗ ನೆರೆ ರಾಜ್ಯದ ಸಂತ್ರಸ್ತರಿಗೆ ನೆರವು ನೀಡುವ ಜರೂರತ್ತು ಏನು ಎಂದು ಸಿಟಿ ರವಿ ನಿನ್ನೆ ಪ್ರಶ್ನೆ ಮಾಡಿದ್ದಾರೆ. ಇದೀಗ ಈಶ್ವರಪ್ಪ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ವಯನಾಡಿನಲ್ಲಿ ಮುಸ್ಲಿಮರನ್ನು ತೃಪ್ತಿಪಡಿಸಲು ಮನೆ ಕಟ್ಟಿಸಿಕೊಡಲು ರಾಜ್ಯ ಸರ್ಕಾರರ ಮುಂದಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕೇರಳದ ವಯನಾಡಿನಲ್ಲಿ ಭೂ ಕುಸಿತದಿಂದ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದಾಗಿ ರಾಜ್ಯ ಸರ್ಕಾರ ಮುಂದಾಗಿರುವುದು ಮಾನವೀಯತೆ ದೃಷ್ಟಿಯಿಂದಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನವೊಲಿಸಲು ಆ ರೀತಿ ಹೇಳಿದ್ದಾರೆ. ಇತ್ತೀಚೆಗೆ ಪ್ರಿಯಾಂಕ ಗಾಂಧಿ ಗೆದ್ದಿರುವುದರಿಂದ ವಯನಾಡಿನ ಮುಸ್ಲಿಮರ ತೃಪ್ತಿ ಪಡಿಸಲು ಹೊರಟಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

ರಾಜ್ಯದಲ್ಲೂ ಸಾಕಷ್ಟು ಕಡೆ ನೆರೆಯಿಂದಾಗಿ ಮನೆಗಳು ಬಿದ್ದಿವೆ. ಶಿವಮೊಗ್ಗದಲ್ಲಿಮನೆಗಳು ಬಿದ್ದಿವೆ. ಇನ್ನೂ ಅವರಿಗೆ ಪರಿಹಾರ ಕೊಟ್ಟಿಲ್ಲ. ಮೊದಲು ಕರ್ನಾಟಕದಲ್ಲಿ ಮನೆ ಬಿದ್ದಿರೋ ಜಾಗದಲ್ಲಿ ಪರಿಹಾರ ಕೊಡಲಿ. ಬಳಿಕ ನೆರೆ ರಾಜ್ಯದವರಿಗೆ ಸಹಾಯ ಮಾಡಲಿ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ