ಬಸ್ ಮುಷ್ಕರ: ಊರಿಗೆ ಹೋಗಲು ಬಸ್ ಬುಕಿಂಗ್ ಮಾಡಬಹುದೇ, ಕೆಎಸ್ ಆರ್ ಟಿಸಿ ಹೇಳಿದ್ದೇನು

Krishnaveni K

ಮಂಗಳವಾರ, 5 ಆಗಸ್ಟ್ 2025 (16:39 IST)
ಬೆಂಗಳೂರು: ಇಂದಿನಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರ ನಡೆಸುತ್ತಿದ್ದು, ಹೀಗಾಗಿ ಈ ವಾರಂತ್ಯಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಊರಿಗೆ ತೆರಳಲು ಯೋಜನೆ ಹಾಕಿಕೊಂಡವರು ಬಸ್ ಬುಕಿಂಗ್ ಮಾಡಬಹುದೇ ಎಂಬ ಗೊಂದಲ್ಲಿದ್ದಾರೆ. ಅವರಿಗೆ ಕೆಎಸ್ ಆರ್ ಟಿಸಿ ಕಡೆಯಿಂದ ಸ್ಪಷ್ಟನೆ ಇಲ್ಲಿದೆ.
 

ಇಂದು ಬೆಳಿಗ್ಗೆಯಿಂದಲೇ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಗಳಿಲ್ಲದೇ ಜನ ತೆರಳಬೇಕಾದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ಪರದಾಡಿದ್ದಾರೆ. ದೂರದ ಊರುಗಳಿಗೆ ತೆರಳಿದವರು ಅಲ್ಲಿಂದ ಹೋಗಬೇಕಾದ ಸ್ಥಳಕ್ಕೆ ಹೋಗಲು ಬಸ್ ಗಳಿಲ್ಲದೇ ತೊಂದರೆ ಅನುಭವಿಸಿದ್ದಾರೆ.

ಇನ್ನೇನು ಈ ವಾರಂತ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬ ಬಂದಿದ್ದು, ಅದರ ಮರುದಿನವೂ ಸೆಕೆಂಡ್ ಸಾಟರ್ಡೇ ನಿಮಿತ್ತ ರಜೆಯಿರುವುದರಿಂದ ಲಾಂಗ್ ವೀಕೆಂಡ್ ಸಿಕ್ಕಂತಾಗುತ್ತದೆ. ಈ ಕಾರಣಕ್ಕೆ ಅನೇಕರು ಈ ವಾರ ಊರಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದಾರೆ.

ಆದರೆ ಈಗ ಬಸ್ ಮುಷ್ಕರದಿಂದಾಗಿ ಬುಕಿಂಗ್ ಮಾಡಬಹುದೇ? ಬುಕಿಂಗ್ ಮಾಡಲು ಬಸ್ ಸಿಗುತ್ತದೆಯೇ ಇಂತಹ ಅನೇಕ ಗೊಂದಲಗಳು ಜನರಲ್ಲಿದೆ. ಕೆಎಸ್ ಆರ್ ಟಿಸಿ ಮೂಲಗಳ ಪ್ರಕಾರ ಮುಷ್ಕರದಿಂದ ಬಸ್ ಓಡಾಟಕ್ಕೆ ತೊಂದರೆಯಾಗಲ್ಲ. ಎಂದಿನಂತೆ ನೀವು ಬುಕಿಂಗ್ ಮಾಡಬಹುದು. ಆಪ್ ನಲ್ಲಿ ವೀಕೆಂಡ್ ನಲ್ಲಿ ಬುಕಿಂಗ್ ಮಾಡುವವರಿಗೆ 15% ರಿಯಾಯಿತಿ ಸೌಲಭ್ಯವೂ ಇದೆ. ಹೀಗಾಗಿ ಊರಿಗೆ ಪ್ರಯಾಣ ಮಾಡುವವರು ಆರಾಮವಾಗಿ ಬಸ್ ಬುಕಿಂಗ್ ಮಾಡಬಹುದು. ಬಸ್ ಗಳ ಸಮಸ್ಯೆಯೂ ಆಗಲ್ಲ ಎಂದು ಸ್ಪಷ್ಟನೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ