ಕುಮಾರಸ್ವಾಮಿಗೆ ಶುರುವಾಗುತ್ತಾ ಸಂಕಷ್ಟ..?

ಮಂಗಳವಾರ, 20 ಜೂನ್ 2017 (11:01 IST)
ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಹೈಕೋರ್ಟ್ ನೀಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಇಂದು ಅಂತ್ಯಗೊಳ್ಳಲಿದ್ದು, ಇಂದು ಮತ್ತೆ ವಿಚಾರಣೆ ನಡೆಯಲಿದೆ. ಕುಮಾರಸ್ವಾಮಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಎಸ್`ಐಟಿ ಇಂದು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ.
 

ಒಂದೊಮ್ಮೆ ಎಸ್`ಐಟಿಯ ಆಕ್ಷೇಪಣೆ ಅಂಗೀಕೃತವಾಗಿ ಕುಮಾರಸ್ವಾಮಿಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾದರೆ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ಗುರುವಾರ ಕುಮಾರಸ್ವಾಮಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯಪೀಠ ಜೂನ್ 20ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ, ಮುಂದಿನ ವಿಚಾರಣೆ ಮುಗಿಯುವವರೆಗೂ ಬಂಧಿಸದಂತೆ ಎಸ್ಐಟಿಗೆ ಆದೇಶಿಸಿತ್ತು.

2007ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕಪ್ಪುಪಟ್ಟಿಯಲ್ಲಿದ್ದ ಜಂತಕಲ್ ಮೈನಿಂಗ್`ಗೆ ಅದಿರು ರಫ್ತಿಗೆ ಅನುಮತಿ ನೀಡಿದೆ ಎಂಬುದು ಆರೋಪ. ಇದರಿಂದಾಗಿ ವಿದೇಶಕ್ಕೆ ಅಕ್ರಮವಾಗಿ ಅದಿರು ರಫ್ತಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ