ಭೂ ಕುಸಿತ : ಆತಂಕದಲ್ಲಿ ಗ್ರಾಮಸ್ಥರು

ಬುಧವಾರ, 23 ಫೆಬ್ರವರಿ 2022 (07:59 IST)
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಭೂ ಕುಸಿತಗೊಂಡಿದೆ.
 
ಕಳೆದ ವರ್ಷ ಜುಲೈನಲ್ಲಿ ಭೂಕುಸಿತಗೊಂಡು ಕಳಚೆ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳು ಹಾನಿಯಾಗಿತ್ತು ಇದೀಗ ಮತ್ತೆ ಗುಡ್ಡ ಕುಸಿತವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಇಡೀ ಗ್ರಾಮ ಸ್ಥಳಾಂತರಿಸಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೇ ಈ ಗ್ರಾಮದ ಜನರನ್ನು ಇದುವರೆಗೂ ಸ್ಥಳಾಂತರಿಸಿಲ್ಲ.

ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಚೆಯಲ್ಲಿ ಜುಲೈ 22 ಮತ್ತು 23 ರಂದು ಭಾರಿ ಪ್ರಮಾಣದಲ್ಲಿ ಬೆಟ್ಟ, ಗುಡ್ಡ ಕುಸಿದಿದ್ದವು. ಊರಿನ ಚಿತ್ರಣವೇ ಬದಲಾಗಿತ್ತು. ಅಂದು ಪ್ರವಾಹ ಕಂಡಿದ್ದ ಗ್ರಾಮದಲ್ಲಿ ಈಗ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.

ಮುನ್ನೆಚ್ಚರಿಕೆ ಅಗತ್ಯ

ಕಳಚೆಯಲ್ಲಿ ಮತ್ತೆ ಭೂ ಕುಸಿತವಾಗಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಚ್ಚರಿಗೆ ನೀಡಿದ್ದು ಈ ಪ್ರದೇಶ ವಾಸಿಸಲು ಯೋಗ್ಯವಾಗಿಲ್ಲ ಎಂದು ವರದಿ ನೀಡಿದೆ. ಆದರೇ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ನೀಡದೆ ನಿರ್ಲಕ್ಷ ಮಾಡಿದೆ.

ಸಂತ್ರಸ್ತರಿಗೆ ಪರ್ಯಾಯ ಜಾಗ ಕೊಡಲಾಗದಿದ್ದರೆ ಅರಣ್ಯ ಇಲಾಖೆಯಿಂದ ಈ ಭೂ ಭಾಗವನ್ನು ವನ್ಯಜೀವಿ ವಲಯಕ್ಕೆ ಸೇರಿಸಿ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸರ್ಕಾರ ನಿರ್ಲಕ್ಷ ಮಾಡದೇ ಪರ್ಯಾಯ ವ್ಯವಸ್ಥೆಯನ್ನು ಆದಷ್ಟು ಬೇಗ ನೀಡಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ