ಲೈನ್ ದುರಸ್ತಿ ವೇಳೆ ಲೈನ್ಮ್ಯಾನ್ ಸಾವು
ಟ್ರಾನ್ಸ್ಫಾರ್ಮ್ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಹೈಟೆನ್ಸನ್ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಶ್ರೀಶೈಲ ಎಂಬುವವರು ಸಾವನ್ನಪ್ಪಿದ್ಧಾರೆ. ಶಿವಮೊಗ್ಗದ ಶಿಕಾರಿಪುರದ ಗ್ರಾಮಾಂತರ ಘಟಕ ವ್ಯಾಪ್ತಿಯಲ್ಲಿ ಬರುವ ಕಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಟ್ರಾನ್ಸ್ಫಾರ್ಮ್ನಲ್ಲಿದ್ದ ಸಮಸ್ಯೆಯನ್ನು ಸರಿಪಡಿಸುವ ಸಂಬಂಧ ಲೈನ್ ಮ್ಯಾನ್ ಶ್ರೀಶೈಲ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸ್ಠೇಷನ್ನಿಂದ LC ಸಹ ತೆಗೆದುಕೊಂಡಿದ್ದರು. LC ಎಂದರೆ ಲೈನ್ ಕ್ಲಿಯರೆನ್ಸ್ ಎಂದು ಅರ್ಥ. ಲೈನ್ ಮ್ಯಾನ್ ತನ್ನ ಸ್ಟೇಷನ್ ಅನ್ನು ಸಂಪರ್ಕಿಸಿ ತಾನು ಕೆಲಸ ಮಾಡಬೇಕಿರುವ ವಿದ್ಯುತ್ ಲೈನ್ಗೆ ಸಂಬಂಧಿಸಿದ ಲೈನ್ನ ವಿದ್ಯುತ್ ಸಪ್ಲೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಕೊಳ್ಳುತ್ತಾನೆ. ಅದರ ಬಗ್ಗೆ ಖಾತರಿ ಪಡಿಸಿಕೊಂಡೇ ಆತ ಕಂಬವನ್ನ ಹತ್ತುತ್ತಾನೆ. ಆದಾಗ್ಯೂ ಈ ದುರ್ಘಟನೆ ಸಂಭವಿಸಿದ್ದು, LC ತೆಗೆದುಕೊಂಡಿದ್ಧಾಗಲೂ ವಿದ್ಯುತ್ ಪ್ರವಹಿಸಿದ್ದು ಹೇಗೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ.