ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಂತೆ-ಜಾತ್ರೆ, ಮದ್ಯ ಮಾರಾಟ ನಿಷೇಧ

ಸೋಮವಾರ, 27 ಆಗಸ್ಟ್ 2018 (20:07 IST)
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2018ರ ಹಿನ್ನೆಲೆಯಲ್ಲಿ ಮತದಾನವು   ಆಗಸ್ಟ್ 31 ರಂದು ಹಾಗೂ  ಮತ ಎಣಿಕೆ ಸೆಪ್ಟೆಂಬರ್ 3ರಂದು ಸಂಬಂಧಪಟ್ಟ ತಾಲೂಕಿನ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಂತೆ-ಜಾತ್ರೆ, ಮದ್ಯಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು  ಆದೇಶ ಹೊರಡಿಸಿದ್ದಾರೆ.

ಚುನಾವಣೆ ಜರುಗಲಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಮತದಾನ ದಿನವಾದ ಆಗಸ್ಟ್ 31ರಂದು ಎಲ್ಲ ತರಹದ ಸಂತೆ ಹಾಗೂ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಮತದಾನ ಕೇಂದ್ರ ಸ್ಥಾಪಿಸಿರುವ ಮತಗಟ್ಟೆಗಳಿಗೆ ಆಗಸ್ಟ್ 31 ಹಾಗೂ ಮತ ಎಣಿಕೆ ಕೇಂದ್ರಗಳಿಗೆ ಸೆಪ್ಟೆಂಬರ್ 3 ರಂದು ರಜೆ ಘೋಷಿಸಲಾಗಿದೆ. ಮತದಾನ ಕೇಂದ್ರ ಹಾಗೂ ಮತ ಎಣಿಕೆ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144ರನ್ವಯ ಚುನಾವಣೆಗೆ ಸಂಬಂಧಪಟ್ಟ ಮತದಾರರು ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರರ ಪ್ರವೇಶವನ್ನು ನಿಷೇಧಿಸಲಾಗಿದೆ.
 ಮತದಾನದ ಹಿಂದಿನ ದಿನವಾದ ಆಗಸ್ಟ್ 30ರಂದು ಬೆಳಿಗ್ಗೆ 7 ರಿಂದ ಆಗಸ್ಟ್ 31ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ದಿನವಾದ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 7 ರಿಂದ ಸೆಪ್ಟೆಂಬರ್ 4 ರ ಬೆಳಿಗ್ಗೆ 7 ಗಂಟೆಯವರೆಗೆ ಚುನಾವಣೆ ಜರುಗಲಿರುವ  ಪ್ರದೇಶಗಳಲ್ಲಿ  ಎಲ್ಲ ತರಹದ ಮದ್ಯದ ಅಂಗಡಿ, ಮದ್ಯ ತಯಾರಿಕಾ ಘಟಕಗಳನ್ನು ಹಾಗೂ ಎಲ್ಲ ತರಹದ ಮದ್ಯಪಾನ, ಸರಾಯಿ, ಸ್ವದೇಶಿ ಹಾಗೂ ವಿದೇಶಿ ಮದ್ಯಪಾನ, ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಇದಲ್ಲದೇ ನಗರ ಸ್ಥಳೀಯ ಸಂಸ್ಥೆಯ ಗಡಿಯಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ಪಾನ ನಿಷೇಧ ಎಂದು ಘೋಷಿಸಲಾಗಿದೆ.

ಆಗಸ್ಟ್ 29ರ ಬೆಳಿಗ್ಗೆ 7 ಗಂಟೆಯ ನಂತರ ಚುನಾವಣಾ ಜರುಗಲಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಸಾರ್ವಜನಿಕ ಸಭೆ ಸಮಾರಂಭ ಹಾಗೂ ಬಹಿರಂಗ ಪ್ರಚಾರಕ್ಕೆ ನಿಷೇಧಿಸಲಾಗಿದೆ  ಅವರು ಆದೇಶ ಹೊರಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ