ಬೆಂಗಳೂರು: ರಾಜ್ಯ ಸರ್ಕಾರ ಫ್ರೀ ಕರೆಂಟ್ ಕೊಟ್ಟಿರುವುದರಿಂದ ಈ ಸಾರಿ ಎಸ್ಎಸ್ಎಲ್ ಸಿ ಮಕ್ಕಳು ಉತ್ತಮ ಫಲಿತಾಂಶ ತರಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಉಚಿತ ಕರೆಂಟ್ ಗೂ ಶಿಕ್ಷಣಕ್ಕೂ ಎತ್ತಣ ಸಂಬಂಧ ಎಂದು ಅವರೇ ವಿವರಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆಯ ಸುಧಾರಣೆ ಬಗ್ಗೆ ಮಾತನಾಡಿದ್ದಾರೆ. ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದಿದ್ದಾರೆ.
ಉಚಿತ ವಿದ್ಯುತ್ ಕೊಟ್ಟಿರುವುದರಿಂದ ಮಕ್ಕಳಿಗೂ ಅನುಕೂಲವಾಗಿದೆ. ಟೀಚರ್ಸ್ ಈಗ ಎಕ್ಸ್ ಟ್ರಾ ಕ್ಲಾಸ್ ಮಾಡ್ತಿದ್ದಾರೆ. ತಂದೆ-ತಾಯಿ ಹೇಳಿಕೊಡುವ ಹಾಗೆ ಆಯಾ ಶಿಕ್ಷಕರೇ ಹೆಚ್ಚುವರಿ ಕ್ಲಾಸ್ ತಗೊಂದು ಹೇಳಿಕೊಟ್ಟಿದ್ದಾರೆ. ಹೀಗಾಗಿ ಮಕ್ಕಳು ಉತ್ತಮ ಫಲಿತಾಂಶ ಕೊಡುತ್ತಾರೆ ಎಂದಿದ್ದಾರೆ.
ಇನ್ನು, ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯ ಗುಣಮಟ್ಟ ಸುಧಾರಣೆಗೂ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಹೇಳಿ ಬಿಸಿಯೂಟ ತಯಾರಿಕೆಗೆ ಹೊಸ ಪಾತ್ರೆಗಳ ಖರೀದಿಗೆ ವ್ಯವಸ್ಥೆ ಮಾಡಿದ್ದೇವೆ. ಪಾತ್ರೆಗಳ ಬದಲಾವಣೆಗೆಂದೇ ಈ ಸಲ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದಾರೆ ಎಂದಿದ್ದಾರೆ.