ಬೆಂಗಳೂರು: ಏನೇ ಆಗಲಿ ಮಾರ್ಚ್ 22 ಕ್ಕೆ ಕರ್ನಾಟಕ ಬಂದ್ ಮಾಡೇ ಮಾಡ್ತೀವಿ ಎಂದು ಕನ್ನಡ ಪರ ಹೋರಾಟಗಾರರು ಇಂದು ಹೇಳಿಕೆ ನೀಡಿದ್ದಾರೆ. ಆದರೆ ಈಗ ಪರೀಕ್ಷಾ ಸಮಯವಾಗಿದ್ದು ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಮರಾಠಿಗರ ದಬ್ಬಾಳಿಕೆ, ಎಂಇಎಸ್ ಸಂಘಟನೆ ನಿಷೇಧ ಹೇರಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಪರ ಸಂಘಟನೆಗಳು ಮಾರ್ಚ್ 22 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿತ್ತು. ಇದರ ಪೂರ್ವಭಾವಿಯಾಗಿ ಇಂದು ನಗರದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆದಿತ್ತು.
ಸಭೆ ಬಳಿಕ ಮಾತನಾಡಿದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ ರಾ ಗೋವಿಂದು, ಶಿವರಾಮೇಗೌಡ ಏನೇ ಆದರೂ ಮಾರ್ಚ್ 22 ಕ್ಕೆ ಕರ್ನಾಟಕ ಬಂದ್ ಮಾಡೇ ಮಾಡ್ತೀವಿ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ಆದರೆ ಅವರ ಈ ಹೇಳಿಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದೀಗ ಎಸ್ಎಸ್ಎಲ್ ಸಿ, ಇತರೆ ತರಗತಿಗಳ ವಾರ್ಷಿಕ ಪರೀಕ್ಷೆಗಳು ನಡೆಯುವ ಸಮಯ. ಕರ್ನಾಟಕ ಬಂದ್ ಎಂದು ರಸ್ತೆ ತಡೆದು, ವಾಹನ ಸಂಚಾರಕ್ಕೆ ತಡೆ ನೀಡಿದರೆ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಿಂದ ಪರಭಾಷಿಕರನ್ನು ಓಡಿಸಿ, ಆದರೆ ಅದಕ್ಕಾಗಿ ನಮ್ಮ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕೊಳ್ಳಿಯಿಡಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಡುತ್ತಿದ್ದಾರೆ.