ಮಹದಾಯಿ ತೀರ್ಪು: ಕನ್ನಡ ಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್‌

ಶುಕ್ರವಾರ, 29 ಜುಲೈ 2016 (17:41 IST)
ಮಹದಾಯಿ ನ್ಯಾಯಾಧಿಕರಣ ತೀರ್ಪು ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
 
ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಹದಾಯಿ ಟ್ರಿಬ್ಯುನಲ್ ನೀಡಿರುವ ತೀರ್ಪು ವಿರೋಧಿಸಿ ನಾಳೆ ನಡೆಯುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ, ಆಟೋ ಮಾಲೀಕರ ಸಂಘ ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ದೈನಂದಿನ ಅಗತ್ಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ.
 
ಸಾ.ರಾ.ಗೋವಿಂದ ನೇತೃತ್ವದಲ್ಲಿ ಬೆಂಗಳೂರಿನ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದು, ಹಿರಿಯ ನಟ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ನಟ, ನಟಿಯರು, ನಿರ್ಮಾಪಕರು, ಸಹಕಲಾವಿದರು ಹಾಗೂ ತಂತ್ರಜ್ಞರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
 
ನಾಳೆ ನಡೆಯುವ ಕರ್ನಾಟಕ ಬಂದ್‌ ವೇಳೆ ಬಹುತೇಕ ಸಾರ್ವಜನಿಕ ಬಸ್‌ ಸಂಚಾರ ಸ್ಥಗಿತವಾಗಲಿದ್ದು, ಹೋಟೆಲ್‌ಗಳು ಸಂಪೂರ್ಣವಾಗಿ ಬಂದ್‌ ಆಗಲಿದ್ದು, ಹಾಲು ಪೂರೈಕೆ, ತರಕಾರಿ, ಹಣ್ಣು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ.
 
ಬಂದ್‌ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ