ಮಹಾತ್ಮ ಗಾಂಧೀಜಿ ಮಾರ್ಗದಲ್ಲಿ ದೇಶ ಸುಭಿಕ್ಷವಾಗಿ ಮುನ್ನಡೆಯಲಿದೆ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶನಿವಾರ, 2 ಅಕ್ಟೋಬರ್ 2021 (21:57 IST)
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಚಿಂತನೆಗಳು ಹಾಗೂ ಆದರ್ಶಗಳು ನಮಗೆ ಮಾದರಿಯಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ದೇಶ ಸುಭಿಕ್ಷವಾಗಿ ಮುನ್ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿರುವ ಗಾಂಧೀಜಿ ಹಾಗೂ ಶಾಸ್ತ್ರಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಗಾಂಧೀಜಿಯವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸುವ ಮೂಲಕ ಕರ್ನಾಟಕದ ಜೊತೆ ಅತ್ಯಂತ ನಿಕಟ ಸಂಪರ್ಕವನ್ನು ಹೊಂದಿದ್ದರು ಎಂದರು.
ಸತ್ಯ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಇಡೀ ವಿಶ್ವಕ್ಕೆ ಮಾದರಿಯಾದವರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು. ಅವರು ನುಡಿದಂತೆ ನಡೆದು ಇತರರಿಗೂ ಪ್ರೇರಣೆಯಾದವರು. ಬ್ರಿಟಿಷರ ವಿರುದ್ದ ಹೋರಾಟ ನಡೆಸಲು ಅವರು ಕಂಡುಕೊಂಡಿದ್ದು ಅಹಿಂಸೆಯ ಮಾರ್ಗ.  ಹೀಗಾಗಿಯೇ ವಿಶ್ವದೆಲ್ಲೆಡೆ ರಾಷ್ಟ್ರಪಿತನಿಗೆ ಅತ್ಯಂತ ಉನ್ನತ ಸ್ಥಾನಮಾನವಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಜನತೆ ನಡೆಯಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ನನ್ನ ಕಲ್ಪನೆಯ ಭಾರತ ಹೇಗಿರಬೇಕೆಂದು ಮಹಾತ್ಮಗಾಂಧಿಯವರು ಅನೇಕ ಕನಸುಗಳನ್ನು ಕಂಡಿದ್ದರು. ಗ್ರಾಮಗಳು ಉದ್ಧಾರವಾದರೆ ಮಾತ್ರ ಭಾರತ ಅಭಿವೃದ್ಧಿಯಾಗಲಿದೆ. ದುಡಿಯುವ ಕೈಗಳಿಗೆ ಕೆಲಸ ಸಿಕ್ಕರೆ ಪ್ರತಿಯೊಬ್ಬರು ಸ್ವಾಲಂಬಿಗಳಾಗುತ್ತಾರೆ ಎಂದು  ಭಾವಿಸಿದ್ದರು ಎಂದರು.
ಮಹಾತ್ಮ ಗಾಂಧಿಯವರಂತೆ ಮಾಜಿ ಪ್ರಧಾನಿ ಲಾಲ್‍ಬಹುದ್ದೂರ್ ಶಾಸ್ತ್ರಿ ಕೂಡ ದೇಶ ಕಂಡ ಸರಳ, ಸಜ್ಜನಿಕೆ ಮತ್ತು ಸೂಕ್ಷ್ಮತೆಯ ಅಪರೂಪದ ರಾಜಕಾರಣಿ. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಅವರು ಎಂದು ಕೊಂಡಾಡಿದರು. ಆದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ ಅವರು ರೈಲ್ವೆ ಸಚಿವರಾಗಿದ್ದ ವೇಳೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ಸಜ್ಜನ ರಾಜಕಾರಣಿಯನ್ನು ಕಾಣುವುದೇ ಅಪರೂಪ ಎಂದರು.
ಸ್ವಾಭಿಮಾನದ ಕಿಚ್ಚ ಹಚ್ಚಿದ ಧೀಮಂತರು:
ಜೈ ಜವಾನ್, ಜೈ ಕಿಸಾನ್ ಘೋಷಣೆ ಮಾಡುವ ಮೂಲಕ ರೈತರು ಮತ್ತು ಸೈನಿಕರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ್ದರು. ಲಾಲ್‍ಬಹುದ್ದೂರ್ ಶಾಸ್ತ್ರಿ ಕೂಡ ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಆಲಮಟ್ಟಿ ಜಲಾಶಯ ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಅವರೇ ಕಾರಣೀಭೂತರು ಎಂದು ತಿಳಿಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ