ಇದ್ದ ರೈಲೇ ಓಡಿಸಲು ಆಗಲ್ಲ, ಬುಲೆಟ್ ಟ್ರೇನ್ ತರ್ತಾರಂತೆ: ಖರ್ಗೆ ವಾಗ್ದಾಳಿ

ಭಾನುವಾರ, 20 ಆಗಸ್ಟ್ 2017 (15:25 IST)
ಕಳೆದ 40 ತಿಂಗಳುಗಳಿಂದ ಪ್ರಧಾನಿ ಮೋದಿ ಸರಕಾರಕ್ಕೆ ಇದ್ದ ರೈಲುಗಳನ್ನೇ ಓಡಿಸಲು ಆಗುತ್ತಿಲ್ಲ. ಬುಲೆಟ್ ರೈಲು ತರುವ ಬಗ್ಗೆ ಮಾತನಾಡುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಲಾದ ದೇವರಾಜ ಅರಸು ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕಳೆದ 40 ತಿಂಗಳಲ್ಲಿ 27 ಭಾರಿ ರೈಲು ಅಪಘಾತಗಳಾಗಿವೆ. 500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, 1000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೋದಿ ಸರಕಾರ ಕಣ್ಮುಚ್ಚಿ ಕುಳಿತಿದೆಯಾ ಎಂದು ಪ್ರಶ್ನಿಸಿದರು.
 
1 ಲಕ್ಷ ಕೋಟಿ ವೆಚ್ಚ ಮಾಡಿ ಪ್ರತಿ ಗಂಟೆಗೆ 500 ಕಿ.ಮೀ ಓಡುವ ಬುಲೆಟ್ ರೈಲಿನ ಬಗ್ಗೆ ಮಾತನಾಡುತ್ತಾರೆ. 60 ಸಾವಿರ ಕೋಟಿ ರೈಲುಗಳ ಸುರಕ್ಷತೆಗಾಗಿ ವೆಚ್ಚ ಮಾಡಿದ್ದಲ್ಲಿ ಇಂತಹ ಅಪಘಾತಗಳು ಸಂಭವಿಸುತ್ತಿರಲಿಲ್ಲ ಎಂದು ಕಿಡಿಕಾರಿದರು.
 
ಇಂದಿರಾ ಕ್ಯಾಂಟಿನ್‌ಗೂ ಬಿಜೆಪಿಯವರ ವಿರೋಧವಿದೆ. ಸರಕಾರಿ ಜಾಗದಲ್ಲಿ ಬಡವರಿಗಾಗಿ ಇಂದಿರಾ ಕ್ಯಾಂಟಿನ್ ಆರಂಭಿಸಿದ್ದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕ್ಲಬ್‌ಗಳಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಗುಡುಗಿದರು.
 
ಬಿಜೆಪಿಯವರು ದೇಶದ ಸಂವಿಧಾನ ಬದಲಿಸಲು ಯತ್ನಿಸುತ್ತಿದ್ದಾರೆ. ದೇಶ ಉಳಿಯಬೇಕಾದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಡಳಿತಕ್ಕೆ ಬರಬೇಕು. ಅಂದಾಗ ಮಾತ್ರ ದೇಶ ಜಾತ್ಯಾತೀತ ರಾಷ್ಟ್ರವಾಗಿ ಉಳಿಯಲು ಸಾಧ್ಯ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ