ಮಂಗಳೂರು: ಸಾಕಲು ಕಷ್ಟವೆಂದು ಮೂವರು ಮಕ್ಕಳನ್ನು ಕೊಂದಿದ್ದ ತಂದೆಗೆ ಮರಣ ದಂಡನೆ ಶಿಕ್ಷೆ

Sampriya

ಮಂಗಳವಾರ, 31 ಡಿಸೆಂಬರ್ 2024 (20:04 IST)
Photo Courtesy X
ಮಂಗಳೂರು: ಪತ್ನಿಯನ್ನು ಕೊಲ್ಲು ಯತ್ನಿಸಿ, ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ತಂದೆಗೆ  ಮರಣದಂಡನೆ ಶಿಕ್ಷೆ ವಿಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ  ಮತ್ತು ಸೆಷೆನ್‌ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಹಾಗೂ ಪತ್ನಿಯನ್ನೂ ಬಾವಿಗೆ ದೂಡಿ ಕೊಲ್ಲಲು ಯತ್ನಿಸಿದ್ದ ಪ್ರಕರಣದಲ್ಲಿ ಮಂಗಳೂರು ತಾಲ್ಲೂಕಿನ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡುಗೆ ಮರಣದಂಡನೆ ಶಿಕ್ಷೆಯಾಗಿದೆ.

ಹಿತೇಶ್‌ ಶೆಟ್ಟಿಗಾರ್‌ (43 ವರ್ಷ) ಅಲಿಯಾಸ್ ಹಿತೇಶ್‌ ಕುಮಾರ್‌ ತನ್ನ ಮಗಳು ರಶ್ಮಿತಾ (14 ವರ್ಷ), ಮಗ ಉದಯ ಕುಮಾರ್ ( 11 ವರ್ಷ) ಹಾಗೂ ದಕ್ಷಿತ್ ಅಲಿಯಾಸ್‌ ದಕ್ಷ್‌ ಕುಮಾರ್ (4 ವರ್ಷ) ಅವರನ್ನು 2022ರ ಜೂನ್‌ 23ರಂದು ಸಂಜೆ ಮನೆ ಸಮೀಪದ ಅಶೋಕ್ ಶೆಟ್ಟಿಗಾರ್‌ ಅವರ ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಪತ್ನಿ ಲಕ್ಷ್ಮೀ ಅವರನ್ನೂ ಬಾವಿಗೆ ತಳ್ಳಿದ್ದ ಎಂದು ಸರ್ಕಾರಿ ವಕೀಲ ಬಿ.ಮೋಹನ್ ಕುಮಾರ್ ತಿಳಿಸಿದರು.

ಹೆಂಡತಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಅವರಿಲ್ಲದಿದ್ದರೆ ತಾನು ಬೇಕಾದ ಹಾಗೆ ಬದುಕಬಹುದು ಎಂದು ಯೋಚಿಸಿ ಅವರನ್ನು ಕೊಲ್ಲಲು ನಿರ್ಧರಿಸಿದ್ದ. ಆತನ ಪತ್ನಿ ಲಕ್ಷ್ಮೀ ಊರಿನ ಕ್ಯಾಂಟೀನ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಮನೆಯಲ್ಲಿ ಬೀಡಿ ಕಟ್ಟಿ ಸಂಸಾರ ನಡೆಸುತ್ತಿದ್ದರು. ಪತ್ನಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಕ್ಕಳನ್ನು ಬಾವಿಗೆ ತಳ್ಳಿದ್ದ. ನೀರಿಗೆ ಬಿದ್ದ ಮಕ್ಕಳು ಬಾವಿಯಲ್ಲಿ ನೇತಾಡುತ್ತಿದ್ದ ಹಗ್ಗವೊಂದನ್ನು ಹಿಡಿದು ಜೀವ ಉಳಿಸಿಕೊಂಡಿದ್ದರು. ಅದನ್ನು ನೋಡಿದ ಹಿತೇಶ್‌ ಆ ಹಗ್ಗವನ್ನೂ ಕತ್ತರಿಸಿ ಅವರು ನೀರಿನಲ್ಲಿ ಮುಳುಗಿ ಸಾಯುವಂತೆ ಮಾಡಿದ್ದರ ಎಂದು ಅವರು ತಿಳಿಸಿದರು.

ಕೆಲಸಕ್ಕೆ ಹೋಗಿದ್ದ ಲಕ್ಷ್ಮೀ ಮನೆಗೆ ಮರಳಿದಾಗ ಮಕ್ಕಳು ಇರಲಿಲ್ಲ. ಮಕ್ಕಳನ್ನು ಹುಡುಕುವ ನೆಪದಲ್ಲಿ ಆಕೆಯನ್ನೂ ಹಿತೇಶ್‌ ಬಾವಿಗೆ ತಳ್ಳಿದ್ದ. ಬಾವಿಗೆ ಬೀಳುವಾಗ ಗಂಡನನ್ನು ಆಕೆ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಇಬ್ಬರೂ ಬಾವಿಗೆ ಬಿದ್ದಿದ್ದರು. ಯಾರೋ ಬಾವಿಗೆ ಬಿದ್ದ ಸದ್ದು ಕೇಳಿ ಎಳನೀರು ವ್ಯಾಪಾರಿ ಮಹಮ್ಮದ್‌ ನಸ್ರತ್ತುಲ್ಲ ಹಾಗೂ ರಾಘವ ಶೆಟ್ಟಿಗಾರ್‌ ಅವರು ಸ್ಥಳಕ್ಕೆ ಧಾವಿಸಿದ್ದರು.

 ರಾಟೆಯಲ್ಲಿ ಹಗ್ಗ ಇಳಿಸಿ ದಂಪತಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದರು. ಮಹಮ್ಮದ್‌ ಅವರು ಈಜು ಬಾರಿದ್ದರೂ ಬಾವಿಗೆ ಇಳಿದು ಅವರನ್ನು ಮೇಲಕ್ಕೆತ್ತಲು ನೆರವಾಗಿದ್ದರು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ವಕೀಲರು ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ