ಮಂಗಳೂರು: ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಉಗ್ರರ ಕೃತ್ಯವನ್ನು ಸಮರ್ಥಿಸಿ ಫೇಸ್ ಬುಕ್ ಪೇಜ್ ಒಂದರಲ್ಲಿ ಪೋಸ್ಟ್ ಹಾಕಲಾಗಿದೆ. ಈ ವ್ಯಕ್ತಿಗಾಗಿ ಈಗ ಪೊಲೀಸರು ತಲಾಷ್ ಮಾಡುತ್ತಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮೊನ್ನೆ ಉಗ್ರರು ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು. ಇವರೆಲ್ಲರೂ ಹಿಂದೂ ಪ್ರವಾಸಿಗರು. ಸ್ಥಳೀಯರನ್ನು ರಕ್ಷಿಸಲು ಹೋದ ಓರ್ವ ಮುಸ್ಲಿಮ್ ಯುವಕನನ್ನೂ ಹತ್ಯೆ ಮಾಡಲಾಗಿತ್ತು.
ಘಟನೆ ಬಗ್ಗೆ ದೇಶದಾದ್ಯಂತ ಆಕ್ರೋಶವಿದೆ. ಉಗ್ರರನ್ನು ಸದೆಬಡಿಯಲು ಸೇನೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಇದರ ನಡುವೆ ಈಗ ನಿಚ್ಚು ಮಂಗಳೂರು ಎಂಬ ಫೇಸ್ ಬುಕ್ ಪೇಜ್ ಒಂದರಲ್ಲಿ ಉಗ್ರರ ದಾಳಿಯನ್ನು ಸಮರ್ಥಿಸಿ ಪೋಸ್ಟ್ ಹಾಕಲಾಗಿದೆ. ಈ ಬಗ್ಗೆ ಉಳ್ಳಾಲದ ಸತೀಶ್ ಕುಮಾರ್ ಎಂಬವರು ದೂರು ನೀಡಿದ್ದು ಪೊಲೀಸರು ಪೋಸ್ಟ್ ಹಾಕಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಈಗ ಪೋಸ್ಟ್ ವಿವಾದವಾಗುತ್ತಿದ್ದಂತೇ ಡಿಲೀಟ್ ಮಾಡಲಾಗಿದೆ.
2023 ರಲ್ಲಿ ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ಮೂವರು ಮುಸ್ಲಿಮರನ್ನು ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್ ಗೆ ಸಾರ್ವಜನುಕವಾಗಿ ನೇಣಿಗೆ ಹಾಕಲಿಲ್ಲ. ಪಾಲ್ಗರ್ ಘಟನೆ ಕಾರಣಕ್ಕೆ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಪೋಸ್ಟ್ ಮಾಡಲಾಗಿತ್ತು. ಇದೀಗ ಈ ಪೋಸ್ಟ್ ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು ನಮ್ಮ ದೇಶದಲ್ಲಿದ್ದುಕೊಂಡೇ ಇಂತಹ ಮಾತನಾಡುವವರೂ ಇದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.