ಬೆಂಗಳೂರು: ರಾಜ್ಯಾದ್ಯಂತ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಭೂ ಪರಿವರ್ತನೆ, ಭೂಮಿ ಬಳಕೆಯ ಬದಲಾವಣೆಗೆ ಸಂಬಂಧಿಸಿದ ಕಾನೂನುಗಳನ್ನು ವ್ಯಾಖ್ಯಾನಿಸಿರುವ ಹೈಕೋರ್ಟ್, 1964ರ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಿದ ನಂತರವೂ, ಕರ್ನಾಟಕ ಪಟ್ಟಣ ಮತ್ತು ಗ್ರಾಮ ಯೋಜನೆ ಕಾಯ್ದೆ-1961 ಅಡಿ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.
ಪೀಠ ತನ್ನ ಆದೇಶದಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮತಿ ಪಡೆದುಕೊಂಡಾಕ್ಷಣ ಕೆಟಿಸಿಪಿ ಕಾಯ್ದೆಯ ಸೆಕ್ಷನ್ 14ರ ಅಡಿಯಲ್ಲಿ ಭೂ ಬಳಕೆಯ ಬದಲಾವಣೆಗೂ ಅನುಮತಿ ಸಿಕ್ಕಿದೆ ಅಥವಾ ತಂತಾನೇ ಬದಲಾವಣೆ ಆಗಿದೆ ಎಂದು ಅರ್ಥವಲ್ಲ. ಭೂಮಿ ಇನ್ನೂ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲೇ ಇದೆ ಎಂದು ಅರ್ಥ. ಹೀಗಾಗಿ ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮೋದನೆ ಸಿಕ್ಕಿದ್ದರೂ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತಿದ್ದರೆ, ಪ್ರಾಧಿಕಾರದಿಂದಲೂ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.