ಬೆಂಗಳೂರಿನಲ್ಲಿ ಕಸ ಗುಡಿಸಲು ರಸ್ತೆಗಿಳಿದಿದೆ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ

ಸೋಮವಾರ, 22 ಮೇ 2017 (18:11 IST)
ಇನ್ನು ಮುಂದೆ ಬೆಂಗಳೂರಿನ ರಸ್ತೆಗಳಲ್ಲಿ ಕಸಗುಡಿಸಲು ಮೆಕ್ಯಾನಿಕಲ್ ಸ್ವೀಪಿಂಗ್ ಮೆಷಿನ್ ಕಾರ್ಯನಿರ್ವಹಿಸಲಿದೆ.ಈ ಮೂಲಕ ರಸ್ತೆಗಳಲ್ಲಿನ ಕಸ ಹಾಗೂ ಧೂಳಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಎಂಟು  ಬೃಹತ್ ಗಾತ್ರದ ಹಾಗೂ ಐದು ಮಧ್ಯಮ ಗಾತ್ರದ ಯಂತ್ರಗಳನ್ನು ಬಿಬಿಎಂಪಿ ಪರಿಚಯಿಸಿದೆ.
 
ವಿಧಾನಸೌಧದ ಮುಂಭಾಗ ಬಿಬಿಎಂಪಿ ಹಮ್ಮಿಕೊಂಡಿದ್ದ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಾರ್ವಜನಿಕರ ಉಪಯೋಗಕ್ಕೆ ಸಮರ್ಪಣೆ ಮಾಡಿದರು. 13ನೆ ಹಣಕಾಸು ಆಯೋಗದ ಅನುದಾನದಲ್ಲಿ ಈ ಯಾಂತ್ರಿಕವಾಗಿ ಕಸ ಗುಡಿಸುವ ಯಂತ್ರಗಳನ್ನು ಬಿಬಿಎಂಪಿ ವತಿಯಿಂದ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ.
 
ಪ್ರತಿದಿನ ಸುಮಾರು 50 ಕಿ.ಮೀ. ರಸ್ತೆಗಳ ಕಸ ತೆರವುಗೊಳಿಸಲು ಹಾಗೂ ಧೂಳಿನ ಸಮಸ್ಯೆ ನೀಗಿಸಲು ಈ ಯಂತ್ರಗಳು ಉಪಯುಕ್ತವಾಗಿವೆ. ಜನದಟ್ಟಣೆಯಿಂದ ಕೂಡಿರುವ ನಗರದ ರಸ್ತೆಗಳು ಧೂಳುಮಯವಾಗಿದ್ದು, ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಮರಳು, ಮಣ್ಣಿನಿಂದಾಗಿ ಬೇಸಿಗೆಯಲ್ಲಿ ಧೂಳೆದ್ದು, ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಮಳೆಗಾಲದಲ್ಲಿ ವಾಹನಗಳು ಸ್ಕಿಡ್ ಆಗಿ ಅವಘಡಗಳು ಸಂಭವಿಸುತ್ತಿದ್ದವು. ಇದಕ್ಕೆಲ್ಲ ಪರಿಹಾರವನ್ನು ಕಂಡುಕೊಳ್ಲುವ ನಿಟ್ಟಿನಲ್ಲಿ ಈ ಯಂತ್ರಗಳು ಕಾರ್ಯನಿರ್ವಹಿಸಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ