ಮೇಕೆದಾಟು : ತಮಿಳುನಾಡಿನ ತಕರಾರು ಸಲ್ಲದು ಎಂದ ಡಿಕೆಶಿ
ಗುರುವಾರ, 6 ಡಿಸೆಂಬರ್ 2018 (19:22 IST)
ಮೇಕೆದಾಟು ನೀರಾವರಿ ಯೋಜನೆಯನ್ನು ನಮ್ಮ ಜಾಗದಲ್ಲಿ ಮಾತ್ರ ಮಾಡುತ್ತಿದ್ದು, ತಮಿಳುನಾಡು ಇದಕ್ಕೆ ತಕಾರರು ಎತ್ತುವುದು ಸೂಕ್ತವಲ್ಲ. ತಮಿಳುನಾಡು ರಾಜಕೀಯಕ್ಕಾಗಿ ಲಾಭಕ್ಕಾಗಿ ಇದನ್ನು ವಿರೋಧ ಮಾಡುವುದು ಬೇಡ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು. ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ನೀರಾವರಿ ಸಚಿವರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ತಮಿಳುನಾಡು ಸರ್ಕಾರ ಮೇಕೆದಾಟು ವಿಚಾರದಲ್ಲಿ ಚರ್ಚಿಸಲು ವಿಶೇಷ ಅಧಿವೇಶನ ಕರೆದಿದೆ. ಈ ಯೋಜನೆಯ ನೀರನ್ನು ನೀರಾವರಿಗೆ ಬಳಸುವುದಿಲ್ಲ. ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ತಮಿಳುನಾಡು ಅನಗತ್ಯವಾಗಿ ಕೋರ್ಟ್ಗೆ ಹೋಗುವುದು ಬೇಡ ಎಂದು ಮನವಿ ಮಾಡುವುದಾಗಿ ಅವರು ತಿಳಿಸಿದರು.
ಮೇಕೆದಾಟು ಯೋಜನೆಯನ್ನು ಜಾರಿಗೆ ತರುವುದರ ವಿರುದ್ಧ ತಮಿಳುನಾಡು ಸರ್ಕಾರ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದೆ. ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.