ಮೇಕೆದಾಟು ಪಾದಯಾತ್ರೆ ಪ್ರಾರಂಭ

ಭಾನುವಾರ, 9 ಜನವರಿ 2022 (14:11 IST)
ಕುಡಿಯುವ ನೀರಿನ ಸಲುವಾಗಿ ಮೇಕೆದಾಡು ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ನೀರಿಗಾಗಿ ನಡಿಗೆ ಹಮ್ಮಿಕೊಳ್ಳಲಾಗಿದೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ನಾವೆಲ್ಲರೂ ಬೆಂಗಳೂರು ತನಕ ನಡೆದೇ ನಡೆಯುತ್ತೇವೆ ಎಂಬ ವಿಶ್ವಾಸವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಗಮದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟಗಳನ್ನು ಮಾಡಿಕೊಂಡೇ ಬಂದಿದೆ. ನಮಗೆ ಹೋರಾಟ ಹೊಸದಲ್ಲ, ಮೇಕೆದಾಟು ಯೋಜನೆ ಶೀಘ್ರ ಜಾರಿಯಾಗಬೇಕು. ಕುಡಿಯುವ ನೀರಿನ ಬವಣೆ ನೀಗಬೇಕು ಎಂಬುದು ನಮ್ಮ ನಿಲುವು ಎಂದರು.
 
ಮೇಕೆದಾಟು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಈಗಾಗಲೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಕೆದಾಟುವಲ್ಲಿ ಸೇರಿದ್ದಾರೆ. ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಕಾವೇರಿ ನದಿಗೆ ವಿದ್ಯುಕ್ತವಾಗಿ ಪೂಜೆ ಮಾಡಿ ಪಾದಯಾತ್ರೆಗಾಗಿ ವಿನ್ಯಾಸ ಮಾಡಿರುವ ಬಾವುಟ ಹಿಡಿದು ತೆಪ್ಪದ ಮೂಲಕ ನದಿ ದಡದ ಸನಿಹ ಸುತ್ತು ಬಂದಿದ್ದಾರೆ.
 
ಆರಂಭದ ದಿನ 15 ಕಿ. ಮೀ. ನಡೆಯುವ ಯೋಜನೆಯನ್ನು ಕಾಂಗ್ರೆಸ್ ನಾಯಕರು ಹಾಕಿಕೊಂಡಿದ್ದಾರೆ. ಭಾಗವಹಿಸುವ ಎಲ್ಲರಿಗೂ ಉಪಹಾರ, ಭೋಜನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ಕೋವಿಡ್ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸುತ್ತಿರುವ ಪಾದಯಾತ್ರೆಗೆ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ