'ಸಂಜೆ ಕಾಲೇಜು ವ್ಯಾಸಂಗ'ದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಮಂಗಳವಾರ, 24 ಆಗಸ್ಟ್ 2021 (12:44 IST)
ಬೆಂಗಳೂರು : ರಾಜ್ಯದ 11 ನಗರ ಪಾಲಿಕೆ ವ್ಯಾಪ್ತಿಯಲ್ಲಿನ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, ರಾಜ್ಯಸರ್ಕಾರವು ಸಂಧ್ಯಾ ಶಕ್ತಿ ಯೋಜನೆಯಡಿ, ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಆರಂಭಿಸಿದೆ. ಈ ಮೂಲಕ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡೋ ಇಚ್ಛೆಯಿದ್ದಂತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ನಡವಳಿಗಳನ್ನು ಹೊರಡಿಸಿದ್ದು, 2021-22ನೇ ಸಾಲಿನ ಅಯವ್ಯಯ ಭಾಷಣದ ಘೋಷಣೆಯಂತೆ ರಾಜ್ಯದ ಆಯ್ದ ಮಹಾನಗರ ಪಾಲಿಕೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲಾದ ಹಿನ್ನಲೆಯಲ್ಲಿ ರಾಜ್ಯದ 11 ನಗರಪಾಲಿಕೆ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂಲ ಸೌಕರ್ಯಗಳನ್ನು ಉಪಯೋಗಿಸಿಕೊಂಡು, ವಿದ್ಯಾರ್ಥಿಗಳು ಅತಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಹಾಗೂ ಉತ್ತಮ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಕಲ್ಪಿಸುವ ಕೋರ್ಸಗಳಾದ ಬಿ.ಕಾಂ ಮತ್ತು ಬಿಸಿಎಗಳನ್ನು ಸಂಧ್ಯಾ ಶಕ್ತಿ ಯೋಜನೆಯಡಿ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜುಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಅದರಂತೆ ರಾಜ್ಯದ 11 ಪಾಲಿಕೆಗಳ ವ್ಯಾಪ್ತಿಯಲ್ಲಿ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಈ ಕೆಳಕಂಡ ಕಾಲೇಜುಗಳಲ್ಲಿ ಪ್ರಾರಂಭಿಸಲಲು ಪ್ರಸ್ತಾಪಿಸಿರುತ್ತಾರೆ. ಹೀಗಿದೆ ಹೊಸದಾಗಿ ಆರಂಭವಾಗುತ್ತಿರುವಂತ 11 ಸಂಜೆ ಕಾಲೇಜುಗಳ ಪಟ್ಟಿ
1. ಸರ್ಕಾರಿ ಆರ್ ಸಿ ಕಾಲೇಜು, ಬೆಂಗಳೂರು
2. ಸರ್ಕಾರಿ ಪ್ರಥಮ ದರ್ಜೆ ಮಹೀಳಾ ಕಾಲೇಜು, ಬೆಳಗಾವಿ
3. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿ.ಹೆಚ್.ರಸ್ತೆ ತುಮಕೂರು
4. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪು ನಗರ ಮೈಸೂರು
5. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿವಮೊಗ್ಗ
6. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಸಿಸಿ ಬ್ಲಾಕ್ ದಾವಣಗೆರೆ
7. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು
8. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಮಾರೇಶ್ವರನಗರ, ಧಾರವಾಡ
9. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಬಾಗ್ ಖಾಜಾ ಕಾಲೋನಿ, ಬಿಜಾಪುರ
10. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂ ರಸ್ತೆ, ಗುಲ್ಬರ್ಗಾ
11. ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ
ಈ ಮೇಲ್ಕಂಡ ಕಾಲೇಜುಗಳಲ್ಲಿ 2021-22ನೇ ಸಾಲಿನ ಅಯವ್ಯಯ ಭಾಷಣ ಕಂಡಿಕೆ-110ರಲ್ಲಿ ಘೋಷಣೆಯಂತೆ 11 ನಗರಪಾಲಿಕೆ ವ್ಯಾಪ್ತಿಯಲ್ಲಿನ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಅತಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಹಾಗೂ ಉತ್ತಮ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎಡೆ ಮಾಡಿಕೊಡುವ ಬಿ.ಕಾಂ ಮತ್ತು ಬಿಸಿಎ ಕೋರ್ಸ್ ಗಳನ್ನು ಸಂಧ್ಯಾ ಶಕ್ತಿ ಯೋಜನೆಯಡಿ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜುಗಳನ್ನು ಪ್ರಾರಂಭಿಸಿ ಆದೇಶಿಸಿದ್ದಾರೆ.