ಮೈಸೂರು: ಶಾಸಕರು, ಸಚಿವರು ಎಂದ್ರೆ ಐಷಾರಾಮಿ ಜೀವನ ನಡೆಸುವವರು ಎಂದು ಜನಸಾಮಾನ್ಯರ ಭಾವನೆ. ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಊಟ, ಲಕ್ಷುರಿ ಕಾರುಗಳಲ್ಲಿ ಓಡಾಟ ಕಾಮನ್. ಆದರೆ ಇಲ್ಲೊಬ್ಬ ಸಚಿವರು ಪುಟ್ಟ ಟೀ ಅಂಗಡಿಯಲ್ಲಿ ಉಪಹಾರ ಸೇವಿಸಿ ಸರಳತೆ ಮೆರೆದಿದ್ದಾರೆ. ಅವರೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್.
ದಸರಾ ಉದ್ಘಾಟನೆಗೂ ಮುನ್ನ ಎಲ್ಲರ ಕುತೂಹಲಕ್ಕೆ ಕಾರಣರಾದವರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಮಹೋತ್ಸವದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಸಚಿವ ಯು.ಟಿ.ಖಾದರ್ ಬಂದಿದ್ದರು. ಈ ಸಂದರ್ಭದಲ್ಲಿ ಸಚಿವರು ಮಹಿಷಾಸುರನ ಪ್ರತಿಮೆ ಬಳಿ ಇರುವ ಪುಟ್ಟ ಫಾಸ್ಟ್ ಫುಡ್ ಮಳಿಗೆ ಮುಂಭಾಗ ಕುಳಿತು ಬೆಳಗಿನ ಉಪಹಾರ ಸೇವಿಸಿದರು. ಸಚಿವರ ಸರಳತೆಯ ಈ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸಚಿವ ಖಾದರ್ ಎಂದೂ ಆಡಂಬರದಿಂದ ಮೆರೆದವರಲ್ಲ. ಅವರ ಈ ಸರಳತನ ಅವರನ್ನ ಹತ್ತಿರದಿಂದ ಬಲ್ಲವರಿಗೆ ಗೊತ್ತೇ ಇದೆ. ತಾವು ಸಾಗುವ ಮಾರ್ಗದಲ್ಲಿ ಯಾರಿಗಾದರೂ ಅಪಘಾತವಾದರೆ ತಾವೇ ಖುದ್ದಾಗಿ ಆಸ್ಪತ್ರೆಗೆ ಕರೆದೊಯ್ಯುವ ಅಪರೂಪದ ವ್ಯಕ್ತಿತ್ವ ಅವರದು. ಆದರೆ ಇದೀಗ ಅವರ ಮತ್ತೊಂದು ಸರಳತೆಯ ಪರಿಚಯ ಮೈಸೂರಿಗರಿಗಾಗಿದೆ.
ತಾನೂ ಕೂಡ ಸಾಮಾನ್ಯ ಎಂದು ಜನಸಾಮಾನ್ಯನ ಜತೆ ಉಪಹಾರ ಸೇವಿಸುವ ಮೂಲಕ ಮತ್ತೊಮ್ಮೆ ತಮ್ಮ ಸರಳ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದ್ದಾರೆ. ಸಚಿವರನ್ನ ಕಂಡ ಜನ, ರಾಜಕಾರಣಿಯ ಸರಳ ಸಜ್ಜನಿಕೆ ನೋಡಿ ಬಾಯ್ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯದಿಂದ ನೋಡಿದ್ದಂತು ಸುಳ್ಳಲ್ಲ.