ಸೂಲಿಬೆಲೆ ಚಕ್ರವರ್ತಿ ಬಗ್ಗೆ ಅಸಭ್ಯ ಪದ ಬಳಕೆ… ಸಚಿವರೇ ಇದೇನಾ ಸಭ್ಯತೆ…
ಶನಿವಾರ, 23 ಸೆಪ್ಟಂಬರ್ 2017 (21:01 IST)
ಮಂಗಳೂರು: ಅರಣ್ಯ ಸಚಿವ ರಮಾನಾಥ ರೈ ಸಂಸ್ಕಾರ ಮರೆತಿದ್ದಾರೆ ಅನ್ನಿಸುತ್ತೆ. ಯಾಕಂದ್ರೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವ ಬ್ರಿಗೇಡ್ ಸಂಚಾಲಕ ಸೂಲಿಬೆಲೆ ಚಕ್ರವರ್ತಿ ಬಗ್ಗೆ ಕೀಳಾಗಿ ಮಾತನಾಡಿದ್ದಲ್ಲದೆ, ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ನಿನ್ನೆ(ಸೆ.23) ಅಸೈಗೋಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತುಳು ಭಾಷೆಯಲ್ಲಿ ಭಾಷಣ ಮಾಡುತ್ತಿದ್ದರು. ಇದೇವೇಳೆ ನೆಹರೂ ಕುಟುಂಬದ ಬಗ್ಗೆ ಮಾತನಾಡುತ್ತಿದ್ದ ಅವರು, ಮಧ್ಯದಲ್ಲಿ ಸೂಲಿಬೆಲೆ ಚಕ್ರವರ್ತಿಯವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈವೇಳೆ ಅವಾಚ್ಯ ಬಳಸಿ ಮಾತನಾಡಿದ್ದಲ್ಲದೆ, ಅದನ್ನೇ ಸಭಿಕರಿಗೆ ನಾಲ್ಕೈದು ಬಾರಿ ಹೇಳಿ, ಕೇಳಿ ವ್ಯಂಗ್ಯ ಮಾಡಿದ್ದಾರೆ. ಇಷ್ಟೇ ಅಲ್ಲದೆ ಸೂಲಿಬೆಲೆ ಚಕ್ರವರ್ತಿಯೊಬ್ಬ ದೇಶದ್ರೋಹಿ. ಅವರನ್ನು ಜೈಲಿಗೆ ಕಳುಹಿಸಬೇಕು ಎಂದಿದ್ದಾರೆ.
ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ಕೀಳುಮಟ್ಟಕ್ಕಿಳಿದು ಮಾತನಾಡಿರುವ ಸಚಿವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸೂಲಿಬೆಲೆ ಚಕ್ರವರ್ತಿ ಅಭಿಮಾನಿಗಳು ಮತ್ತು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಬಿಜೆಪಿ ಮುಖಂಡರು ಅಸಭ್ಯವಾಗಿ ಮಾತನಾಡಿರುವ ಸಚಿವ ರಮಾನಾಥ ರೈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.