ಪೊಲೀಸ್ ಸಿಬ್ಬಂದಿಯ ದುರ್ವ್ಯವಹಾರ ಸಹಿಸಲ್ಲ ; ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಶುಕ್ರವಾರ, 24 ಮಾರ್ಚ್ 2023 (15:00 IST)
ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅವ್ಯವಹಾರದಲ್ಲಿ ಭಾಗಿಯಾದರೆ ಕಠಿಣ ಕ್ರಮ ಖಚಿತ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪುನರುಚ್ಚರಿಸಿದ್ದಾರೆ.ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯೇ ವ್ಯಕ್ತಿಯೊಬ್ಬನನ್ನ ಅಪಹರಿಸಿ,ಕೂಡಿಟ್ಟು ನಲವತ್ತು ಲಕ್ಷಕ್ಕೆ ಬೇಡಿಕೆಯಿಟ್ಟ ಪ್ರಕರಣದ ಸಂಬಂಧ ಇನ್ಫ್ಯಾಂಟ್ರಿ ರಸ್ತೆಯ ತಮ್ಮ ಕಚೇರಿಯಲ್ಲಿ ಮಾತನಾಡಿದ ಆಯುಕ್ತ ಪ್ರತಾಪ್ ರೆಡ್ಡಿ ಮತ್ತೊಮ್ಮೆ ಸಿಬ್ಬಂದಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
 
 'ಬಾಗಲೂರು ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನ ಅಪಹರಿಸಿ ಕೂಡಿ ಹಾಕಿರುವ ಆರೋಪವಿದೆ. ಪ್ರಕರಣದಲ್ಲಿ ಓರ್ವ ಪಿಎಸ್ಐ ಸಹಿತ ಮೂವರು ಸಿಬ್ಬಂದಿ ಕೈವಾಡ ಇರುವುದು ಪತ್ತೆಯಾಗಿದೆ. ಇದುವರೆಗೂ ಓರ್ವ ಸಿಬ್ಬಂದಿ ಸಹಿತ ಮೂವರ ಬಂಧನವಾಗಿದೆ.ಪಿಎಸ್ಐ ತಲೆಮರೆಸಿಕೊಂಡಿದ್ದಾರೆ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ತನಿಖೆಯನ್ನು ಮುಂದುವರೆಸಲಾಗಿದೆ' ಎಂದರು 
 
ಇಲಾಖೆಯಲ್ಲಿ ಈ ರೀತಿಯ ದುರ್ವ್ಯವಹಾರದಲ್ಲಿ ತೊಡಗಿದವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಲಾಗಿದೆ, ಮುಂದೆಯೂ ಕ್ರಮ ಕೈಗೊಳ್ಳಲಾಗುತ್ತದೆ. 99.9% ಸಿಬ್ಬಂದಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಈ ರೀತಿ ಇರುವ ಬೆರಳೆಣಿಕೆಯಷ್ಟು ಸಿಬ್ಬಂದಿಯ ವಿರುದ್ಧ, ಅಮಾನತ್ತು, ಸೇವೆಯಿಂದ ವಜಾದಂತಹ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಪಾತ್ರವಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗ ಈ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು‌‌ ಮಾಡಿ ತನಿಖೆ ಮಾಡಲಾಗುತ್ತಿದೆ' ಎಂದಿದ್ದಾರೆ.
 
ಹುಲಿ ಚರ್ಮ, ಉಗುರು ಮಾರಾಟ ದಂಧೆಯಲ್ಲಿ ತೊಡಗಿದ್ದ ಎನ್ನಲಾದ ರಾಮಾಂಜಿ ಎಂಬಾತನನ್ನ ಅಪಹರಿಸಿ,ಅಕ್ರಮವಾಗಿ ಕೂಡಿಟ್ಟು ನಲವತ್ತು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪದಡಿ ಮಾರತ್ ಹಳ್ಳಿ ಠಾಣೆಯ ಪಿಎಸ್ಐ ರಂಗೇಶ್, ಕಾನ್ಸ್ಟೇಬಲ್ ಸಹಿತ ಮೂವರ ವಿರುದ್ಧ ಬಾಗಲೂರು ಠಾಣೆಯಲ್ಲಿ ಅಪಹರಣ ಪ್ರಕರಣ  ದಾಖಲಾಗಿತ್ತು. ಸಿನಿಮೀಯ ಶೈಲಿಯಲ್ಲಿ ಅಕ್ರಮವಾಗಿ ವ್ಯಕ್ತಿಯನ್ನ ಕೂಡಿಟ್ಟು ಹಣೆಗೆ ಗನ್ ಇಟ್ಟು 40ಲಕ್ಷಕ್ಕೆ ಬೇಡಿಕೆಯಿಟ್ಟ ಆರೋಪ ಪಿಎಸ್ಐ ವಿರುದ್ಧ ಕೇಳಿ ಬಂದಿತ್ತು. ಸದ್ಯ ಕಾನ್ಸ್ಟೇಬಲ್ ಬಂಧನವಾಗಿದ್ದು ಪಿಎಸ್ಐ ರಂಗೇಶ್ ನಾಪತ್ತೆಯಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ