ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬೆಳ್ಳಂ ಬೆಳಿಗ್ಗೆಯೇ ತುಂತುರು ಮಳೆಯಾಗುತ್ತಿದೆ. ಇದರಿಂದ ವಾತಾವರಣ ಕೂಲ್ ಕೂಲ್ ಆಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎನ್ನಲಾಗಿದೆ. ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಇದರಿಂದ ಬೇಸಿಗೆಯ ಬೇಗೆಗೆ ತತ್ತರಿಸಿ ಹೋಗಿದ್ದ ಬೆಂಗಳೂರು ಕೊಂಚ ಮಟ್ಟಿಗೆ ತಂಪಾಗಿತ್ತು. ಇದರ ನಡುವೆ ಕಳೆದ ಎರಡು ದಿನ ಮಳೆ ಕೊಂಚ ಬ್ರೇಕ್ ಪಡೆದಿತ್ತು. ಆದರೆ ಇಂದು ಬೆಳ್ಳಂ ಬೆಳಿಗ್ಗೆಯೇ ತುಂತುರು ಮಳೆಯ ಮೂಲಕ ವರುಣನ ಆಗಮನವಾಗಿದೆ.
ಇನ್ನು ನಾಲ್ಕು ದಿನ ಬೆಂಗಳೂರಿನಲ್ಲಿ ಮಳೆಯಾಗುವ ಸೂಚನೆಯಿದೆ. ಇಂದು ಮತ್ತು ನಾಳೆ ಸಾಧಾರಣ ಮಳೆ ಮತ್ತು ಭಾನುವಾರದಿಂದ ಎರಡು ದಿನ ಮಳೆ ಮತ್ತಷ್ಟು ಹೆಚ್ಚಾಗುವ ಸೂಚನೆಯಿದೆ. ನಿನ್ನೆ 27 ಡಿಗ್ರಿವರೆಗಿದ್ದ ತಾಪಮಾನ ಇಂದು 24 ಡಿಗ್ರಿಗೆ ಇಳಿಕೆಯಾಗಿದೆ. ಮಧ‍್ಯಾಹ್ನದ ನಂತರ ಮಳೆ ಕೊಂಚ ಬಿರುಸಾಗುವ ನಿರೀಕ್ಷೆಯಿದೆ.
ಕೇವಲ ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಹಲವೆಡೆ ಮುಂದಿನ ನಾಲ್ಕೈದು ದಿನಗಳ ಕಾಲ ನಿರಂತರ ಮಳೆಯಾಗುವ ಸೂಚನೆಯಿದೆ. ಕರ್ನಾಟಕದಲ್ಲಿ ಇಂದು ತಾಪಮಾನ ಬೆಳಿಗ್ಗೆ 23 ಡಿಗ್ರಿ ಸೆಲ್ಶಿಯಸ್ ಇದ್ದು, ಗರಿಷ್ಠ 28 ಡಿಗ್ರಿ ತಲುಪುವ ನಿರೀಕ್ಷೆಯಿದೆ. ಕರ್ನಾಟಕದ 16 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸೂಚನೆಯಿದೆ.
ಬೆಂಗಳೂರು ಗ್ರಾಮಾಂತರ, ನಗರ, ಮೈಸೂರು, ಚಿಕ್ಕಬಳ್ಳಾಪುರ, ಕೊಡಗು, ಚಾಮರಾಜನಗರ, ಕೋಲಾರದಲ್ಲಿ ಮೇ 19 ರಿಂದ ಮಳೆ ಬಿರುಸಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಚಿತ್ರದುರ್ಗ, ಹಾಸನ, ಮಂಡ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಕೊಪ್ಪಳ, ರಾಯಚೂರು, ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಹಾವೇರಿ, ಧಾರವಾಡ, ವಿಜಯಪುರ, ಯಾದಗಿರಿಯಲ್ಲೂ ಮಳೆಯಾಗುವ ಸೂಚನೆ ಸಿಕ್ಕಿದೆ.