ಮಗಳನ್ನು ಹೊಡೆದದ್ದೂ ಅಲ್ಲದೆ ತನ್ನ ಮಗಳ ತೊಡೆ ಮತ್ತು ತುಟಿಗಳ ಮೇಲೆ ಬಿಸಿ ಚಮಚದಿಂದ ಬರೆ ಹಾಕಿದ್ದಳು. ಅಲ್ಲದೆ, ಮೆಣಸಿನ ಪುಡಿಯನ್ನು ಮೂಗಿನ ಬಳಿ ಹಿಡಿದು ಉಸಿರಾಡಲು ಹೇಳಿದ್ದಳು. ಇದರಿಂದ ಗಾಯಗೊಂಡಿದ್ದ ಆ ಬಾಲಕಿ ಸಾವನ್ನಪ್ಪಿದ್ದಾಳೆ. ವೆಪ್ಪಂತಟ್ಟೈ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿಯೊಬ್ಬಳು ಹಣ ಕದ್ದ ಆರೋಪದ ಮೇಲೆ ಆಕೆಯ ತಾಯಿಯೇ ತನ್ನ ಮಗಳನ್ನು ಕೊಲೆ ಮಾಡಿದ್ದಾಳೆ. ವೆಪ್ಪಂತಟ್ಟೈ ಗ್ರಾಮ ಆಡಳಿತಾಧಿಕಾರಿ (ವಿಎಒ) ನೀಡಿದ ದೂರಿನ ಆಧಾರದ ಮೇಲೆ ಪೆರಂಬಲೂರು ಮಹಿಳಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆ ಬಾಲಕಿಯ ಮೈಯನ್ನು ಬಿಸಿ ಚಮಚದಿಂದ ಸುಟ್ಟು, ಗಾಯಗೊಳಿಸಿದ್ದಾಳೆ. ನಂತರ ಆಕೆ ಸಾವನ್ನಪ್ಪಿದ್ದಾಳೆ.
ಪಿರ್ಯಾದಿದಾರರ ಪ್ರಕಾರ, ವೆಪ್ಪಂತಟ್ಟೈನ ತಿದೀರ್ ಕುಪ್ಪಂನಲ್ಲಿ ವಾಸವಿದ್ದ ಮಣಿಮೇಕಲೈ ಮತ್ತು ರಾಜ ಎಂಬುವವರ ಮಗಳು 70 ರೂ. ಕಳ್ಳತನ ಮಾಡಿದ್ದಳು. ಇದಕ್ಕಾಗಿ ತಾಯಿ ಮಗುವಿಗೆ ಥಳಿಸಿದ್ದರು. ಮಗಳನ್ನು ಹೊಡೆದದ್ದೂ ಅಲ್ಲದೆ ತನ್ನ ಮಗಳ ತೊಡೆ ಮತ್ತು ತುಟಿಗಳ ಮೇಲೆ ಬಿಸಿ ಚಮಚದಿಂದ ಬರೆ ಹಾಕಿದ್ದಳು. ಅಲ್ಲದೆ, ಮೆಣಸಿನ ಪುಡಿಯನ್ನು ಮೂಗಿನ ಬಳಿ ಹಿಡಿದು ಉಸಿರಾಡಲು ಹೇಳಿದ್ದಳು ಎಂದು ದೂರುದಾರರು ಆರೋಪಿಸಿದ್ದಾರೆ.ಈ ಘಟನೆ ಜನವರಿ 5ರಂದು ನಡೆದಿದೆ. ಇದರಿಂದ ಗಾಯಗೊಂಡ ಮಗು ಆಘಾತಕ್ಕೊಳಗಾಗಿದ್ದು, 2 ದಿನಗಳ ಕಾಲ ಊಟ ಮಾಡಲು ಸಾಧ್ಯವಾಗಿರಲಿಲ್ಲ. ಮಗುವಿಗೆ ಬಹಳ ಗಾಯಗಳಾಗಿದ್ದರಿಂದ ಹತ್ತಿರದ ಔಷಧಾಲಯದಿಂದ ಔಷಧಿಗಳನ್ನು ಖರೀದಿಸಲಾಯಿತು. ನಂತರ ಆ ಮಗುವನ್ನು ಕೃಷ್ಣಪುರಂನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಆ ಬಾಲಕಿಯನ್ನು ತಿರುಚ್ಚಿ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆಗೆ ಸ್ಪಂದಿಸದ ಮಗು ಭಾನುವಾರ ಮುಂಜಾನೆ ಮೃತಪಟ್ಟಿದೆ. ಮಗುವಿನ ಸಾವಿನ ನಂತರವೇ ಘಟನೆ ಬೆಳಕಿಗೆ ಬಂದಿದೆ ಎಂದು ದೂರುದಾರ ಸತೀಶ್ ಪೊಲೀಸರಿಗೆ ತಿಳಿಸಿದ್ದಾರೆ. ತಿರುಚ್ಚಿ ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು ಶವ ಪರೀಕ್ಷೆಯ ನಂತರ ವರದಿಯನ್ನು ನೀಡಲಿದ್ದು, ಮುಂದಿನ ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ