ನಾಯಂಡಹಳ್ಳಿ ಕೆರೆ ತಪಾಸಣೆ:
ನಾಯಂಡಹಳ್ಳಿ ಕೆರೆಯು ಸುಮಾರು 15 ಎಕರೆ ಪ್ರದೇಶದಲ್ಲಿದ್ದು, ವೃಷಭಾವತಿ ಕಾಲುವೆಯಲ್ಲಿ ಹೋಗುವ ನೀರನ್ನು ಸಂಸ್ಕರಿಸಿ ಶುದ್ದ ನೀರನ್ನು ಕೆರೆಗೆ ಬಿಡುವ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ 3-4 ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ನಾಯಂಡಹಳ್ಳಿ ಕೆರೆಯನ್ನು ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ನೀರು ಶುದ್ಧೀಕರಣ ಘಟಕ, ಯೋಗ ಕೇಂದ್ರ, ವಾಯು ವಿಹಾರ, ಬೋಟಿಂಗ್, ಮಕ್ಕಳ ಆಟಿಕೆ ಜಿಮ್, ವಯಸ್ಕರಿಗೆ ಹೊರಾಂಗಣ ವ್ಯಾಯಾಮ ಕೇಂದ್ರ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಕೆರೆಯ ಅಂಗಳದಲ್ಲಿ ಸುಂದರವಾತಾವರಣ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (200 ಬೆಡ್ ವ್ಯವಸ್ಥೆಯ) ಕಟ್ಟಡ ಕಾಮಗಾರಿ ತಪಾಸಣೆ:
ಗೋವಿಂದರಾಜ ವಿಧಾನಸಭಾ ಕ್ಷೇತ್ರದ ಪಂಥರಪಾಳ್ಯ(ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ದಾರಿ) ಕೋಳಗೇರಿ ಕಟ್ಟಡದ ಪಕ್ಕ ಖಾಲಿಯಿರುವ 4.16 ಎಕರೆ ಪ್ರದೇಶದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ 7-8 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಮುಖ್ಯ ಅಭಿಯಂತರರಾದ ಮೃತ್ಯುಂಜಯ ಜಲಮಂಡಳಿಯ ಮುಖ್ಯ ಅಭಿಯಂತರರಾದ ಗಂಗಾಧರ್ ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ, ವಲಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ , ಡಾ.ಮಂಜುಳ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಾವೆಲ್ಲಾ ರೈತರ ಮಕ್ಕಳೇ:
ನಾವೆಲ್ಲ ರೈತರ ಮಕ್ಕಳೇ, ರಾಷ್ಟ್ರದ ಪ್ರಧಾನಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದಾರೆ, ನಾಳೆ ದೈನಂದಿನ ಚಟುವಟಿಕೆಗಳು ಯಥಾ ಸ್ಥಿತಿಯಲ್ಲಿ ಇರುತ್ತವೆ. ಬಂದ್ ಮಾಡುವುದರಿಂದ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ಕುಳಿತು ಚರ್ಚೆ ಮಾಡೋಣ ಎಂದು ಮಾಧ್ಯಮದವರ ನಾಳಿನ ರೈತರ ಬಂದ್ ಬಗೆಗಿನ ಪ್ರೆಶ್ನೆಗಳಿಗೆ ಉತ್ತರಿಸಿದರು.