ಶಾಸಕರ ಸಂಬಳ ಏರಿಸಕ್ಕೆ ದುಡ್ಡಿದೆ, ರೈತರಿಗೆ ಕೊಡಕ್ಕೆ ನಂದಿನಿ ಹಾಲು ದರ ಏರಿಕೆ ಮಾಡ್ಬೇಕಿತ್ತಾ

Krishnaveni K

ಶುಕ್ರವಾರ, 28 ಮಾರ್ಚ್ 2025 (11:41 IST)
ಬೆಂಗಳೂರು: ಶಾಸಕರಿಗೆ ಸಂಬಳ ಏರಿಸಕ್ಕೆ ನಿಮ್ಮತ್ರ ದುಡ್ಡಿದೆ. ರೈತರಿಗೆ ದುಡ್ಡು ಕೊಡಬೇಕೆಂದರೆ ನಂದಿನಿ ಹಾಲಿನ ದರ ಏರಿಕೆ ಮಾಡಿಯೇ ಆಗಬೇಕಿತ್ತಾ? ಹೀಗಂತ ಸಿಎಂ ಸಿದ್ದರಾಮಯ್ಯಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಂದಿನಿ ಹಾಲು ಮತ್ತು ಮೊಸರಿನ ದರವನ್ನು 4 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ ನಲ್ಲಷ್ಟೇ 2 ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 4 ರೂ. ಏರಿಕೆ ಮಾಡಲಾಗಿದೆ.

ಇದೀಗ ನೀಲಿ ಹಾಲಿನ ಪ್ಯಾಕೆಟ್ 42 ರೂ. ನಿಂದ 46 ರೂ. ಗೆ ಏರಿಕೆಯಾಗಿದೆ. ಹಸಿರು ಪ್ಯಾಕೆಟ್ 47 ರೂ., ಆರೆಂಜ್ ಪ್ಯಾಕೆಟ್ 52 ರೂ. ಗೆ ಏರಿಕೆಯಾಗಿದೆ. ಮೊಸರಿಗೆ 50 ರೂ. ನಿಂದ 54 ರೂ.ಗೆ ಏರಿಕೆ ಮಾಡಲಾಗಿದೆ.

ಈಗಾಗಲೇ ಹಲವು ಬೆಲೆ ಏರಿಕೆಗಳ ಮಧ್ಯೆ ಹಾಲಿನ ದರ ಏರಿಕೆ ಜನರಿಗೆ ತೀವ್ರ ಹೊಡೆತ ಬಿದ್ದಂತಾಗಿದೆ. ಯಾಕೆಂದರೆ ಹಾಲು ಎಲ್ಲರ ಅಗತ್ಯ ವಸ್ತು. ಇದೀಗ ಹಾಲಿನ ದರ ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ರೈತರ ಪ್ರೋತ್ಸಾಹ ಧನಕ್ಕೆ ಹಣ ಬೇಕಾಗುತ್ತದೆ ಎಂಬ ಕಾರಣಕ್ಕೆ ಹಾಲು ದರ ಏರಿಕೆ ಮಾಡಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಇದಕ್ಕೆ ಸಾರ್ವನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಶಾಸಕರ, ಸಚಿವರ ವೇತನವನ್ನು ದುಪ್ಪಟ್ಟುಮಾಡಲಾಗಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರದ ಬಳಿ ಹಣವಿರುತ್ತದೆ. ಇಷ್ಟೆಲ್ಲಾ ಗ್ಯಾರಂಟಿ ನೀಡುತ್ತೇವೆ ಎನ್ನುವ ಸರ್ಕಾರಕ್ಕೆ ರೈತರಿಗೆ ನೀಡಲು ಜನರಿಂದಲೇ ಪೀಕಬೇಕಾ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ದುಡಿದ ಅರ್ಧ ಹಣವೂ ಹಾಲಿಗೇ ಸುರಿಯಬೇಕಾಗುತ್ತದೆ. ಹೀಗಾದರೆ ಜೀವನ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ