ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ
ಚಾಮರಾಜನಗರದ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಒಂದರಲ್ಲಿ ಒಂದು ವಾರದ ಗಂಡು ಮಗು ಪತ್ತೆಯಾಗಿದೆ..ನಿನ್ನೆ ಸಂಜೆ ವೇಳೆ ಬಸ್ ನಿಲ್ದಾಣದ ಕುರ್ಚಿಗಳ ಮೇಲೆ ಬ್ಯಾಗ್ ಇರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ನಂತರ ಪೊಲೀಸರು ಬ್ಯಾಗ್‍ನ್ನು ತೆರೆದು ಪರಿಶೀಲಿಸಿದಾಗ ಗಂಡು ಮಗು ಪತ್ತೆಯಾಗಿದೆ.ಗಂಡು ಮಗು ಪತ್ತೆಯಾಗಿರುವ ಸುದ್ದಿ ಪಟ್ಟಣದಾದ್ಯಂತ ತಿಳಿಯುತ್ತಿದ್ದಂತೆ ಸಾರ್ವಜನಿಕರು ತಂಡೋಪತಂಡವಾಗಿ ಠಾಣೆಗೆ ಆಗಮಿಸಿ ಮಗುವನ್ನು ಪಡೆಯಲು ಮುಗಿಬಿದ್ದರು. ಇತ್ತ ಪೊಲೀಸರು ಮಗುವಿನ ವಾರಸುದಾರರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.