ಬೆಂಗಳೂರು: ಕರಾವಳಿಯಲ್ಲಿ ರಾತ್ರಿಯೆಲ್ಲಾ ಭಾರೀ ಮಳೆಯಾಗಿದ್ದು, ಇಂದು ಬೆಳಿಗ್ಗೆಯೂ ಮೋಡ ಕವಿದು ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ಇನ್ನೂ ಮೂರು ದಿನ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಡಗು, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೆ ಬೆಂಗಳೂರು ಗ್ರಾಮಾಂತರ, ನಗರ, ಬೀದರ್, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ರಾಮಗರನ, ವಿಜಯಪುರ, ಯಾದಗಿರಿ ಮುಂತಾದೆಡೆ ಇಂದು ಮಳೆಯಾಗುವ ಸಾಧ್ಯತೆಯಿದೆ.
ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ರಾತ್ರಿ ಮಳೆ ಜೊತೆಗೆ ಗುಡ್ಡ ಕುಸಿತದಿಂದಾಗಿ ಅನಾಹುತವೇ ಸಂಭವಿಸಿತ್ತು. ಇದೀಗ ಕರಾವಳಿಯಲ್ಲೂ ರಾತ್ರಿ ಮಳೆ ಎಂದರೆ ಜನರು ಭಯಪಡುವಂತಾಗಿದೆ. ಭಾರೀ ಮಳೆಯಿಂದಾಗಿ ಈಗಾಗಲೇ ನದಿಗಳು ಅಪಾಯ ಮಟ್ಟಮೀರಿ ಹರಿಯುತ್ತಿದೆ. ಹೀಗಾಗಿ ಜನ ಭಯದಲ್ಲೇ ಕಾಲ ಕಳೆಯುವಂತಾಗಿದೆ.