ಹುಬ್ಬಳ್ಳಿ: ಇತ್ತೀಚೆಗಷ್ಟೇ ಬಿವಿಬಿ ಕಾಲೇಜು ಕ್ಯಾಂಪಸ್ ನಲ್ಲಿ ಫಯಾಜ್ ನಿಂದ ಬರ್ಬರವಾಗಿ ಹತ್ಯೆಗೀಡಾದ ನೇಹಾ ಹೀರೇಮಠ್ ತಂದೆ ನಿರಂಜನ್ ಹೀರೇಮಠ್ ಗೆ ಸಿಎಂ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ತನ್ನ ಕಾಲೇಜು ಕ್ಯಾಂಪಸ್ ನಲ್ಲಿಯೇ ಫಯಾಜ್ ಎಂಬಾತನಿಂದ ನೇಹಾ ಬರ್ಬರವಾಗಿ ಹತ್ಯೆಗೀಡಾಗಿದ್ದಳು. ಪ್ರೀತಿ ನಿರಾಕರಿಸಿದ್ದಕ್ಕೆ ಈ ಕೊಲೆಯಾಗಿತ್ತು. ಇದರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸ್ವತಃ ಕಾಂಗ್ರೆಸ್ ಕಾರ್ಪೋರೇಟರ್ ಆಗಿರುವ ನಿರಂಜನ್ ಹೀರೇಮಠ್ ಇದು ಲವ್ ಜಿಹಾದ್ ಎಂದಿದ್ದಲ್ಲದೆ, ಪ್ರಕರಣ ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂದಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ಮೇಲೆ ಬಹಿರಂಗವಾಗಿ ಕಿಡಿ ಕಾರಿದ್ದರು.
ಇದರ ಬೆನ್ನಲ್ಲೇ ಹಲವು ರಾಜಕೀಯ ನಾಯಕರು ನಿರಂಜನ್ ಮನೆಗೆ ಭೇಟಿ ಕೊಟ್ಟಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ನೇಹಾ ಮನೆಗೆ ಬಂದಿರಲಿಲ್ಲ. ಇದರ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಇದೀಗ ಸರ್ಕಾರದ ಪರವಾಗಿ ಸಚಿವ ಎಚ್ ಕೆ ಪಾಟೀಲ್ ಭೇಟಿ ನೀಡಿದ್ದಾರೆ.
ಈ ವೇಳೆ ಎಚ್ ಕೆ ಪಾಟೀಲ್ ಕರೆ ಮಾಡಿ ಸಿದ್ದರಾಮಯ್ಯನವರ ಜೊತೆ ನಿರಂಜನ್ ಮಾತನಾಡಿಸಿದ್ದಾರೆ. ಈ ವೇಳೆ ನಿರಂಜನ್ ಗೆ ಸಿದ್ದರಾಮಯ್ಯ ವೆರಿ ಸಾರಿ ಎಂದಿದ್ದಾರೆ. ಅಲ್ಲದೆ, ನೇಹಾ ಸಾವಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ ಎಂದಿದ್ದಾರೆ. ಈ ವೇಳೆ ನಿರಂಜನ್ ಕೂಡಾ ಮಗಳು ಸಾವಿಗೀಡಾದ ದುಃಖದಲ್ಲಿ ತಾನು ಬಹಿರಂಗವಾಗಿ ಸರ್ಕಾರದ ಮತ್ತು ಪೊಲೀಸರ ಬಗ್ಗೆ ನೀಡಿದ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದಾರೆ. ಅಲ್ಲದೆ, ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.