ಬೆಂಗಳೂರು: ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಳೆಯಿಂದಲೇ ಮದ್ಯ ನಿಷೇಧ ಮಾಡಲಾಗಿದೆ.
ನಾಳೆಯಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮದ್ಯ ಸಿಗಲ್ಲ. ನಾಳೆ ಮಧ್ಯರಾತ್ರಿಯಿಂದ ಏಪ್ರಿಲ್ 26 ರ ಮಧ್ಯರಾತ್ರಿವರೆಗೆ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗುತ್ತದೆ. ಅದರಂತೆ ಗುಂಪುಗೂಡುವಂತಿಲ್ಲ ಮತ್ತು ಮದ್ಯದಂಗಡಿಗಳು ಬಂದ್ ಆಗಲಿವೆ.
ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ನಗರದಾದ್ಯಂತ ನಾಳೆಯಿಂದ ಪೊಲೀಸ್ ಸರ್ಪಗಾವಲು ಏರ್ಪಡಲಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.
ಇಂದಿಗೆ ಬೆಂಗಳೂರಿನಲ್ಲಿ ಬಹಿರಂಗ ಸಮಾವೇಶ, ಪ್ರಚಾರಕ್ಕೆ ತೆರೆ ಬೀಳಲಿದೆ. ನಾಳೆಯಿಂದ ಎರಡು ದಿನಗಳ ಕಾಲ ಬಹಿರಂಗ ಸಮಾವೇಶಗಳು, ಸಭೆಗಳಿಗಾಗಿ ಜನರು ಒಟ್ಟುಗೂಡುವಂತಿಲ್ಲ. ಏಪ್ರಿಲ್ 26 ರಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಮೊದಲ ಹಂತದ ಮತದಾನ ನಡೆಯಲಿದೆ.