ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ನಡೆಸುವಾಗ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಭಾವುಕರಾದ ಘಟನೆ ನಡೆದಿದೆ.
ನಾನು ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ. ಬದುಕಿದ್ದಷ್ಟು ದಿನ ರೈತರಿಗಾಗಿ ಒಳಿತು ಮಾಡುವ ಸಂಕಲ್ಪ ತೊಟ್ಟಿದ್ದೇನೆ ಎನ್ನುತ್ತಾ ದೇವೇಗೌಡರು ಕಣ್ಣೀರು ಹಾಕಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ಲಿಸಿಕೊಟ್ಟರೆ ತಮಿಳುನಾಡಿನಿಂದ ನಮ್ಮ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿಕೊಡುತ್ತೇನೆ ಎಂದು ಮೋದಿಯವರು ಭರವಸೆ ಕೊಟ್ಟಿದ್ದಾರೆ ಎಂದೂ ಈ ಸಂದರ್ಭದಲ್ಲಿ ಹೇಳಿದರು.
ಇನ್ನೊಂದೆಡೆ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, ಸಚಿವ ಕೃಷ್ಣ ಭೈರೇಗೌಡ, ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನಮ್ಮ ಪಕ್ಷ ಕಾಂಗ್ರೆಸ್ ಎಂದಿದ್ದಾರೆ.
ದೇವೇಗೌಡರು ದೇಶದ ಪ್ರಧಾನಿಯಾಗಿದ್ದು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಪಕ್ಷದ ಸಹಕಾರದಿಂದಲೇ ಹೊರತು ಬಿಜೆಪಿ ಪಕ್ಷದಿಂದಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿ ಕಾರಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವ್ ಗೌಡ ಪರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಚುನಾವಣಾ ರೋಡ್ ಶೋ ಉದ್ದೇಶಿಸಿ ಸಚಿವ ಕೃಷ್ಣ ಭೈರೆಗೌಡ ಮಾತನಾಡಿದರು.
ಕೇಂದ್ರ ಸರ್ಕಾರ ಆರು ಕೋಟಿ ಕನ್ನಡಿಗರಿಗೆ ಅನುದಾನ ಕಡಿತ ಮಾಡಿದ ವಿಚಾರದಲ್ಲಿ ಧ್ವನಿ ಎತ್ತದವರು, ಬರ ಪರಿಹಾರದಲ್ಲಿ ಆಗಿರುವ ಅನ್ಯಾಯದ ವಿರುದ್ದ ತುಟಿ ಬಿಚ್ಚದವರು ಈಗ ಪ್ರಧಾನಿಗಳ ಪಕ್ಕದಲ್ಲಿ ಕೂತು ಏನೇನೋ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಅನುದಾನದ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಿ ಹೋರಾಟ ಮಾಡಿ ಜಯ ಸಾಧಿಸಿದೆ ಎಂದು ಸಚಿವ ಕೃಷ್ಣ ಭೈರೆಗೌಡ ಹೇಳಿದರು.
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕ ರಾಜ್ಯಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತಿ ಕಡಿಮೆ ಅನುದಾನ ನೀಡಿ ಸತತ ಹತ್ತು ವರ್ಷಗಳ ಕಾಲ ವಂಚನೆ ಎಸಗಿದೆ. ಇದನ್ನು ಡಬಲ್ ಇಂಜಿನ್ ಸರ್ಕಾರ ಇದ್ದಾಗಲೂ ಯಾವ ಬಿಜೆಪಿ ನಾಯಕರು ಕೂಡ ಪ್ರಶ್ನಿಸಲಿಲ್ಲ. ಬೇರೆ ಬೇರೆ ರಾಜ್ಯಗಳಿಗೆ ಕಣ್ಣ ಮುಂದೆಯೇ ವಿಶೇಷ ಪ್ಯಾಕೇಜುಗಳು ಘೋಷಣೆಯಾದಾಗಲೂ ಕೂಡ ಕರ್ನಾಟಕದ ಬಿಜೆಪಿ ಸಂಸದರು ಬಾಯಿ ಮುಚ್ಚಿಕೊಂಡಿದ್ದನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅನುದಾನಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಕೊನೆಗೆ ಸರ್ವೋಚ್ಚ ನ್ಯಾಯಾಲಯವು ಒಂದು ವಾರದ ಒಳಗೆ ಕರ್ನಾಟಕಕ್ಕೆ ಬರಬೇಕಾದ ಪಾಲನ್ನು ಒಂದು ವಾರದೊಳಗೆ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಇದು ಆರು ಕೋಟಿ ಕನ್ನಡಿಗರ ಆತ್ಮಸಾಕ್ಷಿಯ ಹೋರಾಟಕ್ಕೆ ಸಂದ ಜಯ ಎಂದು ಸಚಿವ ಕೃಷ್ಣಭೈರೆಗೌಡ ಅಭಿಪ್ರಾಯಪಟ್ಟರು.