ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ-ಸಿಎಂ

ಭಾನುವಾರ, 2 ಜುಲೈ 2023 (19:33 IST)
ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ-ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು. 
 
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಸಿದ್ದರಾಮಯ್ಯ ಶೋಷಿತ ಸಮುದಾಯಗಳಿಗೆ ಧ್ವನಿ ಆಗುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯವನ್ನು ಒಟ್ಟಾಗಿಸಿ ಕಾಗಿನೆಲೆ ಮಹಾಸಂಸ್ಥಾನಕ್ಕೆ ನಾಂದಿ ಹಾಡಲಾಯಿತು. ಮೊದಲ ಸ್ವಾಮೀಜಿ ತಾರಕಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬರುತ್ತಿರುವ ಪೀಠ ಈಗ ನಿರಂಜನಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾಜಮುಖಿಯಾಗಿ ನಡೆಯುತ್ತಿದೆ ಎಂದರು. 
 
ನಾವು ಚುನಾವಣೆ ವೇಳೆ ನೀಡಿರುವ ಐದೂ ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡುತ್ತೇವೆ. ಯಾರೇ ಆಡಿಕೊಂಡರೂ ಈ ವರ್ಷದ ಬಜೆಟ್ ನಲ್ಲೇ ಐದೂ ಘೋಷಣೆಗಳಿಗೂ ಹಣ ಕೊಡುತ್ತೇವೆ. ನಮ್ಮ ಐದೂ ಘೋಷಣೆಗಳು ಜಾತಿ-ಧರ್ಮ ಮೀರಿದವುಗಳು. ಸರ್ವ ಜನಾಂಗದ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಇವರ ಸಂಕಷ್ಟ ನಿವಾರಣೆಗೆ ಈ ಐದು ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ ಎಂದರು. 
 
ನಾನು ಅಧಿಕಾರದಲ್ಲಿ ಇರುವವರೆಗೂ ಶೋಷಿತ ಜಾತಿಗಳಿಗೆ, ದಲಿತ ಸಮುದಾಯಗಳಿಗೆ, ಅಲ್ಪ ಸಂಖ್ಯಾತ ಸಮುದಾಯಗಳ, ಎಲ್ಲಾ ಜಾತಿಯ ಬಡವರ ಏಳಿಗೆಗೆ ಶ್ರಮಿಸುತ್ತೇನೆ. ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಭರವಸೆ ನೀಡಿದರು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ