ನನ್ನನ್ನೂ ಯಾರೂ ಸೈಡ್ ಲೈನ್ ಮಾಡುತ್ತಿಲ್ಲ: ಯಡಿಯೂರಪ್ಪ

ಮಂಗಳವಾರ, 19 ಅಕ್ಟೋಬರ್ 2021 (15:03 IST)
ಶಿವಮೊಗ್ಗ : ಬಿಜೆಪಿಯಾಗಲಿ ಅಥವಾ ನರೇಂದ್ರ ಮೋದಿಯವರು ಹಾಗೂ ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ. ನಾನು ಮತ್ತೆ ಮತ್ತೆ ಬಹಳ ಸ್ಪಷ್ಟ ಮಾಡಿ ಹೇಳುತ್ತೇನೆ, ನಾನು ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಯಾರು ಒತ್ತಡ ತಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊಂದಲ ತರುವಂತಹ ಪ್ರಯತ್ನವನ್ನು ಯಾರು ಮಾಡಬೇಡಿ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸೋಣ. ನಮ್ಮೆಲ್ಲರ ಅದೃಷ್ಟಕ್ಕೆ ಜಗತ್ತು ಮೆಚ್ಚಿದ ಮೋದಿ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬೆಂಬಲಿಗರಾಗಿ ನಾವೇಲ್ಲಾ ನಿಂತುಕೊಳ್ಳುತ್ತೇವೆ ಎಂದರು.
ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದೆ. ಅ.20 ಹಾಗೂ 21 ರಂದು ಸಿಂಧಗಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಅ.22 ಹಾಗೂ 23 ರಂದು ಹಾನಗಲ್ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಅಗತ್ಯ ಬಿದ್ದರೆ ಹಾನಗಲ್ ಕ್ಷೇತ್ರದಲ್ಲಿ ಇನ್ನೂ ಒಂದು ದಿನ ಇರುತ್ತೇನೆ. ಎಲ್ಲಾ ಎಂಎಲ್ ಎ, ಎಂಪಿ ಗಳು ಸಹ ಜೊತೆಗೆ ಬರಲಿದ್ದು, ಸಿಎಂ ಬೊಮ್ಮಾಯಿ, ನಾನು ಎಲ್ಲರೂ ಓಡಾಡುತ್ತೇವೆ. ನೂರಕ್ಕೆ ನೂರರಷ್ಟು ಎರಡು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿಯವರ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪಿವೆ. ಬೊಮ್ಮಾಯಿಯವರು ಇತ್ತೀಚೆಗೆ ಉತ್ತಮ ಕೊಡುಗೆ ನೀಡಿದ್ದು, ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ತಲುಪುತ್ತಿವೆ. ಜೊತೆಗೆ ನಾನಿದ್ದಗಾಲೂ ಮಾಡಿದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದೆ. ಲಕ್ಷಾಂತರ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಂತು, ಗೌರವದಿಂದ ಬದುಕುವ ವ್ಯವಸ್ಥೆಯಾಗಿದೆ. ಅನೇಕ ಅಭಿವೃದ್ಧಿ ಕಾರ್ಯ ಮಾಡಿರುವ ನಮ್ಮ ಪಕ್ಷಕ್ಕೆ ಜನ ಬೆಂಬಲ ಕೊಡ್ತಾರೆ ಎಂಬ ವಿಶ್ವಾಸವಿದೆ. ಎರಡು ಕ್ಷೇತ್ರದಲ್ಲೂ ಬಹುದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ. ಯಾವುದೇ ಚುನಾವಣೆ ಬಂದರೂ ನಾವು ಹಗುರವಾಗಿ ತೆಗೆದುಕೊಳ್ಳಲ್ಲ. ಚುನಾವಣೆಯಲ್ಲಿ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ