ಈಶಾನ್ಯ ಹಿಂಗಾರು ಚುರುಕು: ಇನ್ನೆರಡು ದಿನ ಮಳೆ ಸಾಧ್ಯತೆ

ಬುಧವಾರ, 17 ನವೆಂಬರ್ 2021 (20:43 IST)
ಬೆಂಗಳೂರು: ಈಶಾನ್ಯ ಹಿಂಗಾರು ಮಳೆ ರಾಜ್ಯದಲ್ಲಿ ಚುರುಕಾಗಿದ್ದು, ನಿನ್ನೆಯಿಂದ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಎರಡು ದಿನ ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮತ್ತೆ ಕೆಲವೆಡೆ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು-ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 
 
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ. 
 
ಚಿತ್ರದುರ್ಗ, ಬೆಳಗಾವಿ, ಹಾವೇರಿ, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆಯಾಗಿದೆ. ಆದರೆ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾದ ವರದಿಯಾಗಿದೆ ಎಂದಿದೆ. 
 
ಬಂಗಾಳಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ನಾಳೆಯವರೆಗೂ ಮುಂದುವರೆಯಲಿದೆ ಎಂದು ತಿಳಿಸಿದೆ. 
 
ಈ ಬಾರಿ ವಾಡಿಕೆಗಿಂತ ಹೆಚ್ಚು ಹಿಂಗಾರು ಮಳೆ:  
 
ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. 
ಹಿಂಗಾರು ಚುರುಕಾಗಿರುವುದರಿಂದ ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಮಿಂಚಿನಿಂದ ಕೂಡಿದ ಮಳೆ ಕೆಲವೆಡೆ ಆಗಲಿದೆ. ಈ ಬಾರಿ ಹಿಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣ ಮಳೆಯಾಗಿದೆ ಎಂದು ಹೇಳಿದೆ. 
 
ರಾಜಧಾನಿಯಲ್ಲಿ ಎರಡು ದಿನ ಬಿಡುವು: 
 
ರಾಜಧಾನಿ ಸೇರಿದಂತೆ ರಾಜ್ಯದ ಕೆಲವು ಕಡೆ ಎರಡು ದಿನಗಳ ಕಾಲ ಜಿಟಿಜಿಟಿ ಮಳೆ ಬಿಡುವು ಕೊಟ್ಟಿತ್ತು. ಆದರೆ, ನಿನ್ನೆ ಸಂಜೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಆರಂಭವಾಗಿ ನಿರಂತರವಾಗಿ ಮಳೆಯಾಗಿತ್ತು. ಇಂದು ( ಬುಧವಾರ) ಬೆಳಗ್ಗೆ ಕೂಡ ತುಂತುರು ಮಳೆ ಬಂದಿದ್ದು ಮತ್ತೆ ಜಿಟಿಜಿಟಿ ಮಳೆ ಆರಂಭವಾಗಲಿದೆಯೇ ಎಂಬ ಆತಂಕ ಜನರಲ್ಲಿ ಉಂಟಾಗಿತ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ